ಗಡಿ ದಾಟಿ ಬಂದ 1500 ಉಗ್ರರ ಹತ್ಯೆ: ಇಸ್ರೇಲ್‌

| Published : Oct 11 2023, 12:45 AM IST

ಸಾರಾಂಶ

ಗಾಜಾ ಗಡಿಗೆ ಹೊಂದಿಕೊಂಡ ತನ್ನ ದೇಶದ ವ್ಯಾಪ್ತಿಯೊಳಗೆ 1500 ಹಮಾಸ್‌ ಉಗ್ರರ ಶವ ಪತ್ತೆಯಾಗಿದೆ ಎಂದು ಇಸ್ರೇಲ್‌ ಸೇನೆ ಮಂಗಳವಾರ ಮಾಹಿತಿ ನೀಡಿದೆ. ಇದರರ್ಥ ತನ್ನ ಪ್ರದೇಶಗಳಿಗೆ ನುಗ್ಗಿದ ಹಮಾಸ್‌ ಉಗ್ರರನ್ನು ಇಸ್ರೇಲ್‌ ಸೇನೆ ಹತ್ಯೆ ಮಾಡಿದೆ.
ಜೆರುಸಲೇಂ/ಟೆಲ್‌ ಅವಿವ್‌: ಹಮಾಸ್‌ ಉಗ್ರರು ಮತ್ತು ಇಸ್ರೇಲಿ ಸೇನೆ ನಡುವಿನ ಸಂಘರ್ಷ ಸತತ 4ನೇ ದಿನವಾದ ಮಂಗಳವಾರ ಮತ್ತಷ್ಟು ತೀವ್ರಗೊಂಡಿದ್ದು, ಗಾಜಾ ಪ್ರದೇಶದ ಹಲವು ಆಯಕಟ್ಟಿನ ಪ್ರದೇಶಗಳ ಮೇಲೆ ಇಸ್ರೇಲಿ ಸೇನಾ ಪಡೆ ಭಾರೀ ಪ್ರಮಾಣ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಮಾಸ್‌ ಸರ್ಕಾರದ ಸಚಿವರ ಮನೆ, ಸರ್ಕಾರಿ ಕಟ್ಟಡಗಳು ನೆಲ ಸಮವಾಗಿದೆ. ಇದರ ನಡುವೆ, ಗಾಜಾ ಗಡಿಗೆ ಹೊಂದಿಕೊಂಡ ತನ್ನ ದೇಶದ ವ್ಯಾಪ್ತಿಯೊಳಗೆ 1500 ಹಮಾಸ್‌ ಉಗ್ರರ ಶವ ಪತ್ತೆಯಾಗಿದೆ ಎಂದು ಇಸ್ರೇಲ್‌ ಸೇನೆ ಮಂಗಳವಾರ ಮಾಹಿತಿ ನೀಡಿದೆ. ಇದರರ್ಥ ತನ್ನ ಪ್ರದೇಶಗಳಿಗೆ ನುಗ್ಗಿದ ಹಮಾಸ್‌ ಉಗ್ರರನ್ನು ಇಸ್ರೇಲ್‌ ಸೇನೆ ಹತ್ಯೆ ಮಾಡಿದೆ. ಏತನ್ಮಧ್ಯೆ 4 ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 1600 ಮತ್ತು ಗಾಯಾಳುಗಳ ಸಂಖ್ಯೆ 6500 ದಾಟಿದೆ. ಮೃತರಲ್ಲಿ ಇಸ್ರೇಲಿನ 900 ಹಾಗೂ ಹಮಾಸ್‌ನ 704 ಜನರಿದ್ದಾರೆ. ಆದರೆ ಇಸ್ರೇಲ್‌ ಹೇಳಿಕೊಂಡ 1500 ಹಮಾಸ್‌ ಉಗ್ರರ ಸಂಖ್ಯೆಯು ಈ ಅಂಕಿ-ಸಂಖ್ಯೆಗೆ ಸೇರ್ಪಡೆ ಆಗಿಲ್ಲ. ಏಕೆಂದರೆ ಇಸ್ರೇಲ್‌ ಹೇಳಿಕೊಂಡಿರುವ 1500 ಹಮಾಸ್‌ ಉಗ್ರರ ಸಾವನ್ನು ಹಮಾಸ್‌ ಇನ್ನೂ ದೃಢಪಡಿಸಿಲ್ಲ. ನೆತನ್ಯಾಹು ಗುಡುಗು: ಯುದ್ಧ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ‘ನಾವು ಈಗಷ್ಟೇ ಹಮಾಸ್‌ ಮೇಲೆ ದಾಳಿ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಏನು ಮಾಡಲಿದ್ದೇವೋ ಅದು ಹಮಾಸ್‌ನ ಹಲವು ತಲೆಮಾರುಗಳಲ್ಲೂ ಪ್ರತಿಧ್ವನಿಸಲಿದೆ’ ಎಂದು ಮತ್ತಷ್ಟು ಭಾರಿ ದಾಳಿಯ ಮುನ್ಸೂಚನೆ ನೀಡಿದ್ದಾರೆ. ಭೀಕರ ದಾಳಿ: ನೆತನ್ಯಾಹು ಹೇಳಿಕೆ ಹೊರಬೀಳುತ್ತಿದ್ದಂತೆಯೇ ಕಳೆದ 3 ದಿನಗಳಿಂದ ತನ್ನ ಗಡಿಯಂಚಿನ ಪ್ರದೇಶಗಳಲ್ಲಿರುವ ಹಮಾಸ್‌ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ್ದ ಇಸ್ರೇಲಿ ಸೇನಾ ಪಡೆ, ಇದೀಗ ತನ್ನ ದಾಳಿಯನ್ನು ಇನ್ನಷ್ಟು ಒಳಕ್ಕೆ ವಿಸ್ತರಿಸಿದೆ. ಸೋಮವಾರ ರಾತ್ರಿಯಿಂದೀಚೆಗೆ ಗಡಿಯಿಂದ ದೂರ ಇರುವ ಹಲವು ಪ್ರದೇಶಗಳನ್ನು ಗುರಿಯಾಗಿಸಿ ಇಸ್ರೇಲಿ ಯುದ್ಧ ವಿಮಾನಗಳು ಭಾರೀ ದಾಳಿ ನಡೆಸಿವೆ. ಈ ದಾಳಿಯಲ್ಲಿ ರಿಮಾಲ್‌ ಜಿಲ್ಲೆಯಲ್ಲಿನ ಸರ್ಕಾರ ಹಲವು ಕಟ್ಟಡಗಳು, ಸಚಿವರ ಮನೆ ಸಂಪೂರ್ಣ ನೆಲಸಮವಾಗಿದೆ. ಈವರೆಗಿನ ದಾಳಿಯಲ್ಲಿ ಕನಿಷ್ಠ 790 ಮನೆಗಳು ಪೂರ್ಣ ನಾಶವಾಗಿದ್ದು, 5330 ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ. ಸಂಸತ್‌ ಕಟ್ಟಡಗಳು, ಸಚಿವಾಲಯಗಳು ನಮ್ಮ ಗುರಿಯಾಗಿದ್ದವು ಎಂದು ಇಸ್ರೇಲಿ ಸೇನೆ ಖಚಿತಪಡಿಸಿದೆ. ಗಾಜಾಪಟ್ಟಿ ಪ್ರದೇಶದಲ್ಲಿ ವಾಸಿಸುತ್ತಿರುವ 23 ಲಕ್ಷ ಜನರ ಪೈಕಿ ಈಗಾಗಲೇ ಅಂದಾಜು 2 ಲಕ್ಷ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿ ಪಲಾಯನ ಮಾಡಿದ್ದಾರೆ. ಗಡಿ ಜನರ ತೆರವು: ಈ ನಡುವೆ ಗಾಜಾಪಟ್ಟಿ ಪ್ರದೇಶದೊಂದಿಗೆ ಗಡಿ ಹಂಚಿಕೊಂಡಿರುವ ತನ್ನ ದೇಶದ ಹಲವು ಪ್ರದೇಶಗಳ ಜನರನ್ನು ಇಸ್ರೇಲ್‌ ಸರ್ಕಾರ ತೆರವುಗೊಳಿಸಿ ಸುರಕ್ಷಿತ ಪ್ರದೇಶಕ್ಕೆ ರವಾನಿಸಿದೆ. ಇದು ಮುಂದಿನ ದಿನಗಳಲ್ಲಿ ದಾಳಿ- ಹೋರಾಟ ತೀವ್ರಗೊಳ್ಳುವುದರ ಸೂಚನೆ ಎನ್ನಲಾಗಿದೆ. ಮತ್ತೊಂದೆಡೆ ಗಾಜಾದೊಂದಿಗೆ ಹೊಂದಿರುವ ಗಡಿ ತಪಾಸಣಾ ಪ್ರದೇಶಗಳನ್ನು ಮರಳಿ ಪೂರ್ಣ ಪ್ರಮಾಣದಲ್ಲಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭೂಗಡಿಯನ್ನು ಸಂಪೂರ್ಣವಾಗಿ ರಕ್ಷಿಸಿಕೊಂಡಿದೆ. ಒತ್ತೆಯಾಳು ಹತ್ಯೆ ಬೆದರಿಕೆ: ಈ ನಡುವೆ ಇಸ್ರೇಲಿ ಸೇನಾ ಪಡೆ ಜನವಸತಿ ಪ್ರದೇಶಗಳ ಮೇಲೆ ಮುನ್ನೆಚ್ಚರಿಕೆ ನೀಡದೇ ದಾಳಿ ನಡೆಸುತ್ತಿದೆ ಎಂದು ಆರೋಪಿಸಿರುವ ಹಮಾಸ್‌ ಉಗ್ರರು, ಒಂದು ವೇಳೆ ಮುನ್ನೆಚ್ಚರಿಕೆ ನೀಡದೇ ನಾಗರಿಕರ ಮೇಲೆ ದಾಳಿ ನಡೆಸಿದರೆ ಪ್ರತಿ ದಾಳಿಗೆ, ಪ್ರತಿಯಾಗಿ ಓರ್ವ ಹತ್ಯೆಯಾಳುವನ್ನು ಬಲಿಪಡೆಯುವುದಾಗಿ ಹಾಗೂ ಹತ್ಯೆಯ ವಿಡಿಯೋ ಬಿಡುಗಡೆ ಮಾಡುವುದಾಗಿ ಎಚ್ಚರಿಸಿದ್ದಾರೆ. ಆದರೆ ಒಬ್ಬನೇ ಒಬ್ಬ ಒತ್ತೆಯಾಳು ಜೀವಕ್ಕೆ ತೊಂದರೆಯಾದರೆ ಪರಿಣಾಮ ನೆಟ್ಟಗಿರದು ಎಂದು ಇಸ್ರೇಲ್‌ ಸೇನೆ ಎಚ್ಚರಿಸಿದೆ.