ಜಪಾನ್‌ನ ಮೊದಲ ಖಾಸಗಿ ಉಪಗ್ರಹ ರಾಕೆಟ್‌ ಸ್ಫೋಟ

| Published : Mar 14 2024, 02:01 AM IST

ಸಾರಾಂಶ

ಜಪಾನ್‌ನ ಮೊದಲ ಖಾಸಗಿ ಉಪಗ್ರಹ ರಾಕೆಟ್‌ ಹಾರಿದ ಕೆಲವೇ ಸೆಕೆಂಡಲ್ಲಿ ಸ್ಫೋಟವಾಗಿ ಪತನಗೊಂಡಿದೆ.

ಟೋಕಿಯೋ: ಜಪಾನ್ ದೇಶದ ಬಹುನಿರೀಕ್ಷಿತ ಮೊದಲ ಖಾಸಗಿ ಉಪಗ್ರಹ ಉಡ್ಡಯನ ಯೋಜನೆ ವಿಫಲಗೊಂಡಿದೆ. ಉಪಗ್ರಹ ಹೊತ್ತಿದ್ದ ಸ್ಪೇಸ್ಒನ್‌ ಸಂಸ್ಥೆಯ ಕೈರೊಸ್‌ ರಾಕೆಟ್‌ ನಭಕ್ಕೆ ಚಿಮ್ಮಿದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡಿದೆ. ಸ್ಪೇಸ್‌ಒನ್‌ ಸಂಸ್ಥೆಯ ವಕಯಾಮಾ ಉಡ್ಡಯನ ಕೇಂದ್ರದಿಂದ ಆಗಸಕ್ಕೆ ಹಾರಿದ 60 ಅಡಿ ಉದ್ದದ ಉಪಗ್ರಹ ಹೊತ್ತ ರಾಕೆಟ್‌ ಕೆಲವೇ ಕ್ಷಣಗಳಲ್ಲಿ ಬೆಂಕಿಯುಂಡೆ ಉಗುಳಿ ಪ್ರದೇಶದ ತುಂಬೆಲ್ಲ ಧೂಳು ಮಿಶ್ರಿತ ಹೊಗೆ ಹೊರಸೂಸಿತು. ಈ ದೋಷಕ್ಕೆ ಸೂಕ್ತ ಕಾರಣ ಇನ್ನೂ ತಿಳಿದುಬಂದಿಲ್ಲ. ಇದರ ಕುರಿತು ತನಿಖೆ ನಡೆಸುವುದಾಗಿ ಸಂಸ್ಥೆ ತಿಳಿಸಿದೆ. ಈ ರಾಕೆಟ್‌ನಲ್ಲಿ ಸರ್ಕಾರಿ ಉಪಗ್ರಹವೂ ಇದ್ದು, ನಭಕ್ಕೆ ಹಾರಿದ 51 ನಿಮಿಷದಲ್ಲಿ ತನ್ನ ಕಕ್ಷೆಗೆ ಸೇರಬೇಕಿತ್ತು. ಇದರೊಂದಿಗೆ ಎಲಾನ್‌ ಮಸ್ಕ್‌ರ ಫಾಲ್ಕನ್‌ಗೆ ಪ್ರತಿಯಾಗಿ ನಭಕ್ಕೆ ಖಾಸಗಿ ಉಪಗ್ರಹ ಹಾರಿಸುವ ಜಪಾನ್‌ ಯೋಜನೆ ವಿಫಲಗೊಂಡಿದೆ.