ಚಂದ್ರನ ಮೇಲೆ ಜಪಾನ್‌ ನೌಕೆ ಲ್ಯಾಂಡಿಂಗ್‌ ಯಶಸ್ವಿ

| Published : Jan 28 2024, 01:20 AM IST

ಚಂದ್ರನ ಮೇಲೆ ಜಪಾನ್‌ ನೌಕೆ ಲ್ಯಾಂಡಿಂಗ್‌ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಇಸ್ರೋದ ಚಿತ್ರಗಳ ಮ್ಯಾಪಿಂಗ್‌ ಬಳಸಿ ಲ್ಯಾಂಡಿಂಗ್‌ ಆಗಿರುವುದರ ಕುರಿತು ಜಪಾನ್‌ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ ಮತ್ತು ಚಂದ್ರನ ಮೇಲೆ ತೆಗೆದಿರುವ ಮೊದಲ ಫೋಟೋಗಳನ್ನು ಬಿಡುಗಡೆ ಮಾಡಿದೆ.

ಟೋಕಿಯೋ: ಇಸ್ರೋದ ಚಂದ್ರಯಾನ-2 ಯೋಜನೆಯ ಆರ್ಬಿಟರ್ ತೆಗೆದಿದ್ದ ಚಿತ್ರಗಳ ಸಹಾಯದಿಂದ ಜಪಾನ್‌ ತನ್ನ ಲ್ಯಾಂಡರ್‌ರನ್ನು ಸುರಕ್ಷಿತವಾಗಿ ಚಂದ್ರನ ಮೇಲೆ ಲ್ಯಾಂಡ್‌ ಮಾಡಿದೆ. ಈ ಮೂಲಕ ಕ್ರಾಷ್‌ ಲ್ಯಾಂಡಿಂಗ್‌ ಆಗಿ ಯಾನ ವಿಫಲವಾಗಿದೆ ಎಂಬ ಹೇಳಿಕೆಯನ್ನು ಜಪಾನ್‌ ಹಿಂಪಡೆದಿದೆ.

ಚಂದ್ರನ ಅಧ್ಯಯನಕ್ಕಾಗಿ ಜಪಾನ್‌ನ ಬಾಹ್ಯಾಕಾಶ ಸಂಸ್ಥೆ ಜಾಕ್ಸಾ ಉಡಾವಣೆ ಮಾಡಿದ್ದ ಯೋಜನೆಯಲ್ಲಿನ ಲ್ಯಾಂಡರ್‌ ಕೊನೆ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಗೆ ಸಿಲುಕಿಕೊಂಡ ಕಾರಣ ಚಂದ್ರಯಾನ-2 ಯೋಜನೆಯ ಆರ್ಬಿಟರ್ ತೆಗೆದಿದ್ದ ಚಿತ್ರಗಳನ್ನು ಬಳಸಿ, ಚಂದ್ರನ ಮೇಲೆ ಲ್ಯಾಂಡರ್‌ ಇಳಿಯಬೇಕಾದ ಸ್ಥಳವನ್ನು ಬದಲಾವಣೆ ಮಾಡಿ ಜಪಾನ್‌ ತನ್ನ ಲ್ಯಾಂಡರನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡಿದೆ. ಈ ಮೂಲಕ ಚಂದ್ರನ ಮೇಲೆ ಲ್ಯಾಂಡರ್‌ ಇಳಿಸಿದ 5ನೇ ದೇಶ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಆ ದೇಶದ ಬಾಹ್ಯಾಕಾಶ ಸಂಸ್ಥೆ ‘ಜಾಕ್ಸಾ’ ಹೇಳಿದೆ.

ಈ ಯೋಜನೆಯಲ್ಲಿ ಜಪಾನ್‌ ಪಿನ್‌ಪಾಯಿಂಟ್‌ ಲ್ಯಾಂಡಿಂಗನ್ನು ಕೈಗೊಂಡಿತ್ತು. ಹೀಗಾಗಿ ಲ್ಯಾಂಡರ್‌ ಇಳಿಸಲು ಕೇವಲ 10 ಮೀ. ಅಗಲದ ಜಾಗವನ್ನು ಮಾತ್ರ ಗುರುತಿಸಲಾಗಿತ್ತು. ಆದರೆ ಲ್ಯಾಂಡರ್‌ ಚಂದ್ರನಿಂದ 50 ಮೀ. ಎತ್ತರದಲ್ಲಿದ್ದಾಗ, ಒಂದು ಎಂಜಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡು ಸೋಲಾರ್‌ ಪ್ಯಾನಲ್‌ಗಳು ತೆರೆದುಕೊಳ್ಳಲಿಲ್ಲ. ಹೀಗಾಗಿ ಚಂದ್ರನ ಮೇಲಿನ ನೆಲದ ಚಿತ್ರಗಳು ಲಭ್ಯವಾಗದ ಕಾರಣ, ಚಂದ್ರಯಾನ-2 ತೆಗೆದಿದ್ದ ಚಿತ್ರಗಳನ್ನು ಬಳಸಿ ಲ್ಯಾಂಡರ್‌ ಇಳಿಯಬೇಕಾದ ಸ್ಥಳವನ್ನು ಬದಲಾವಣೆ ಮಾಡಲಾಯಿತು ಎಂದು ಹೇಳಿದೆ.

ಮುಂದಿನ ದಿನಗಳಲ್ಲಿ ಇಸ್ರೋ ಹಾಗೂ ಜಾಕ್ಸಾ ಸೇರಿಕೊಂಡು ಮತ್ತೊಂದು ಚಂದ್ರಯಾನ ಯೋಜನೆ ಕೈಗೊಳ್ಳಲು ತೀರ್ಮಾನಿಸಿದ್ದು, ಈ ಯೋಜನೆಯ ಲ್ಯಾಂಡರನ್ನು ಜಪಾನ್‌ ತಯಾರಿಸಲಿದೆ.