ಸಾರಾಂಶ
ವಾಷಿಂಗ್ಟನ್: ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಸಂಜೆ 4 ಗಂಟೆಯ ಬಳಿಕ ಕೆಲಸ ಮಾಡಲು ಆಗುವುದಿಲ್ಲ ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ.
ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಮಾತ್ರ 81 ವರ್ಷದ ಬೈಡೆನ್ ಕೆಲಸ ಮಾಡಬಲ್ಲರು. ಸತತ ಆರು ತಾಸಿನ ಕೆಲಸದ ಬಳಿಕ ಅವರು ಮಾತನಾಡುವಾಗ ಎಡವಟ್ಟು ಮಾಡಿಕೊಳ್ಳುತ್ತಾರೆ. ಅವರಿಗೆ ತುಂಬಾ ಸುಸ್ತಾಗುತ್ತದೆ. ವಿದೇಶಗಳಿಗೆ ಹೋದಾಗ ಈ ಸಮಸ್ಯೆ ಹೆಚ್ಚಾಗುತ್ತದೆ ಎಂದು ವರದಿಯೊಂದು ಹೇಳಿದೆ.
ಇತ್ತೀಚೆಗೆ ಜೋ ಬೈಡೆನ್ ಮಾತನಾಡುವಾಗ ಒಂದಕ್ಕೊಂದು ಸಂಬಂಧವಿಲ್ಲದ ಹೇಳಿಕೆ ನೀಡಿ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಜೊತೆಗಿನ ಅಧ್ಯಕ್ಷೀಯ ಚರ್ಚೆಯಲ್ಲೂ ಲಯ ತಪ್ಪಿದ್ದರು. ಅವರಿಗೆ ಅರಳು-ಮರುಳು ಉಂಟಾಗಿದ್ದು, ಮತ್ತೊಂದು ಅವಧಿಗೆ ಆಯ್ಕೆಯಾದರೆ ದೇಶವನ್ನು ಹೇಗೆ ಮುನ್ನಡೆಸುತ್ತಾರೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಅದರ ನಡುವೆಯೇ ಈ ವರದಿ ಹೊರಬಿದ್ದಿದೆ.
ವಯಸ್ಸಿನ ತೊಂದರೆ ಇರುವುದರಿಂದಲೇ ಶ್ವೇತಭವನದ ಅಧಿಕಾರಿಗಳು ಜೋ ಬೈಡೆನ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಕಾರ್ಯಕ್ರಮಗಳನ್ನು ಬೆಳಿಗ್ಗೆ 10ರಿಂದ ಸಂಜೆ 4ರ ನಡುವೆಯೇ ನಿಗದಿಪಡಿಸುತ್ತಿದ್ದಾರೆ ಎಂದು ವರದಿ ಹೇಳಿದೆ.