ಭಾರತದ ಜತೆ ಸ್ಟಾರ್ಮರ್‌ ಉತ್ತಮ ಬಾಂಧವ್ಯ ಸಾಧ್ಯತೆ

| Published : Jul 06 2024, 12:56 AM IST / Updated: Jul 06 2024, 04:37 AM IST

ಸಾರಾಂಶ

ಲೇಬರ್ ಪಕ್ಷ ಬ್ರಿಟನ್‌ನಲ್ಲಿ 14 ವರ್ಷ ಬಳಿಕ ಮತ್ತೆ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಬದಲಾದ ಬ್ರಿಟನ್‌ ರಾಜಕೀಯ ಪರಿಸ್ಥಿತಿಯಲ್ಲಿ ಭಾರತ ಹಾಗೂ ಬ್ರಿಟನ್‌ ಸಂಬಂಧ ಹೇಗಿರಬಹುದು ಎಂಬುದು ಕುತೂಹಲ ಕೆರಳಿಸಿದೆ.

ಲಂಡನ್‌: ಲೇಬರ್ ಪಕ್ಷ ಬ್ರಿಟನ್‌ನಲ್ಲಿ 14 ವರ್ಷ ಬಳಿಕ ಮತ್ತೆ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಬದಲಾದ ಬ್ರಿಟನ್‌ ರಾಜಕೀಯ ಪರಿಸ್ಥಿತಿಯಲ್ಲಿ ಭಾರತ ಹಾಗೂ ಬ್ರಿಟನ್‌ ಸಂಬಂಧ ಹೇಗಿರಬಹುದು ಎಂಬುದು ಕುತೂಹಲ ಕೆರಳಿಸಿದೆ.

ಈ ಮುನ್ನ ಲೇಬರ್‌ ಪಕ್ಷವು ಕಾಶ್ಮೀರ ವಿವಾದದಲ್ಲಿ ಮೂರನೇಯವರ ಮಧ್ಯಸ್ಥಿಕೆ ಅಗತ್ಯ ಎಂದು ಹೇಳಿ ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಈಗ ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕತೆ ಎನ್ನಿಸಿಕೊಂಡಿರುವ ಕಾರಣ ಲೇಬರ್‌ ಪಕ್ಷ ಕೊಂಚ ಥಂಡಾ ಹೊಡೆದಂತಿದೆ. ಹೀಗಾಗಿ ಇತ್ತೀಚಿನ ಚುನಾವಣಾ ಪ್ರಚಾರದಲ್ಲಿ ಸ್ಟಾರ್ಮರ್‌ ಅವರು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವಾಗ, ‘ಕಾಶ್ಮೀರವು ಭಾರತ-ಪಾಕಿಸ್ತಾನಕ್ಕೆ ಸಂಬಂಧಿಸಿದ ದ್ವಿಪಕ್ಷೀಯ ವಿಷಯ’ ಎಂದು ನಿಲುವು ಬದಲಿಸಿದ್ದರು.

ಇದೇ ವೇಳೆ ಭಾರತ-ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದ ಹಾಗೂ ಬ್ರಿಟನ್‌ನಲ್ಲಿ ವಲಸಿಗರನ್ನು ಹತ್ತಿಕ್ಕುವ ಕ್ರಮ- ಈ ಎರಡೂ ವಿಷಯಗಳು ಉಭಯ ದೇಶಗಳ ನಡುವಿನ ಪ್ರಮುಖ ವಿಷಯಗಳಾಗಿವೆ. ಇವುಗಳಲ್ಲಿ ಸ್ಟಾರ್ಮರ್‌ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಕುತೂಹಲದ ವಿಷಯ.

ಆದರೆ ಗೆದ್ದ ನಂತರ ಸ್ಟಾರ್ಮರ್‌, ‘ಭಾರತದ ಜತೆ ಉತ್ತಮ ಬಾಂಧವ್ಯ ಹೊಂದಲು ಬಯಸಿರುವೆ’ ಎಂದು ಹೇಳಿರುವುದು ಆಶಾದಾಯಕ ವಿದ್ಯಮಾನವಾಗಿದೆ.