ಸಾರಾಂಶ
ಭಾರತ ಮತ್ತು ಮಾಲ್ಡೀವ್ಸ್ ನಡುವೆ ಪ್ರವಾಸೋದ್ಯಮ ವಿಚಾರವಾಗಿ ಸೃಷ್ಟಿಯಾಗಿರುವ ರಾಜತಾಂತ್ರಿಕ ಬಿಕ್ಕಟ್ಟಿನ ಬೆನ್ನಲ್ಲೇ ಭಾರತೀಯರಿಂದ ಶುರುವಾಗಿರುವ ‘ಬಾಯ್ಕಾಟ್ ಮಾಲ್ಡೀವ್ಸ್’ ಅಭಿಯಾನಕ್ಕೆ ಅಲ್ಲಿನ ವಿಪಕ್ಷಗಳು ಹಾಗೂ ಉದ್ಯಮ ಕಂಗಾಲಾಗಿವೆ.
ಮಾಲೆ: ಭಾರತ ಮತ್ತು ಮಾಲ್ಡೀವ್ಸ್ ನಡುವೆ ಪ್ರವಾಸೋದ್ಯಮ ವಿಚಾರವಾಗಿ ಸೃಷ್ಟಿಯಾಗಿರುವ ರಾಜತಾಂತ್ರಿಕ ಬಿಕ್ಕಟ್ಟಿನ ಬೆನ್ನಲ್ಲೇ ಭಾರತೀಯರಿಂದ ಶುರುವಾಗಿರುವ ‘ಬಾಯ್ಕಾಟ್ ಮಾಲ್ಡೀವ್ಸ್’ ಅಭಿಯಾನಕ್ಕೆ ಅಲ್ಲಿನ ವಿಪಕ್ಷಗಳು ಹಾಗೂ ಉದ್ಯಮ ಕಂಗಾಲಾಗಿವೆ.
ಹೀಗಾಗಿ ಬಹಿಷ್ಕಾರ ಕೈಬಿಡಬೇಕು ಎಂದು ಉದ್ಯಮ ಆಗ್ರಹಿಸಿದ್ದರೆ, ಭಾರತ ವಿರೋಧಿ ನೀತಿ ಅನುಸರಿಸಿ ದೇಶದ ಆರ್ಥಿಕತೆಗೆ ಮಾರಕವಾಗುತ್ತಿರುವ ನೂತನ ಮಾಲ್ಡೀವ್ಸ್ ರಾಷ್ಟ್ರಾಧ್ಯಕ್ಷ ಮೊಹಮ್ಮದ್ ಮುಯಿಜು ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ.
ಇದರ ನಡುವೆ, ಚೀನಾ ಪ್ರವಾಸದಲ್ಲಿರುವ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು ಕೂಡ ಭಾರತದ ಪ್ರವಾಸಿಗರು ಇನ್ನು ಮಾಲ್ಡೀವ್ಸ್‌ಗೆ ಬರುವುದಿಲ್ಲ ಎಂದು ಅರಿತಿದ್ದು, ‘ಹೆಚ್ಚಿನ ಸಂಖ್ಯೆಯಲ್ಲಿ ಚೀನಾ ಪ್ರವಾಸಿಗರು ಮಾಲ್ಡೀವ್ಸ್‌ಗೆ ಆಗಮಿಸಬೇಕು’ ಎಂದು ಕೋರಿದ್ದಾರೆ.
ಉದ್ಯಮದ ಕೋರಿಕೆ: ಮಾಲ್ಡೀವ್ಸ್ ಪ್ರವಾಸೋದ್ಯಮ ಮಂಗಳವಾರ ಹೇಳಿಕೆ ನೀಡಿ, ‘ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಮಾಲ್ಡೀವ್ಸ್ ಸಚಿವರ ಹೇಳಿಕೆ ಖಂಡಿಸುತ್ತೇವೆ. ಮಾಲ್ಡೀವ್ಸ್ ಪ್ರವಾಸೋದ್ಯಮದಲ್ಲಿ ಭಾರತದ ಕೊಡುಗೆ ಸಾಕಷ್ಟಿದೆ.
ಹೀಗಾಗಿ ಮಾಲ್ಡೀವ್ಸ್ ಪ್ರವಾಸದ ಬುಕಿಂಗ್ ರದ್ದು ಘೋಷಣೆ ಮಾಡಿರುವ ಭಾರತದ ಈಸ್ ಮೈ ಟ್ರಿಪ್ ಟೂರಿಸಂ ಕಂಪನಿ ತನ್ನ ನಿರ್ಧಾರ ಹಿಂಪಡೆಯಬೇಕು’ ಎಂದು ಕೋರಿದೆ.‘ಲಕ್ಷದ್ವೀಪ ಪ್ರವಾಸದ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡು ಲಕ್ಷದ್ವೀಪ ಪ್ರವಾಸ ಉತ್ತೇಜಿಸಿದ್ದ ಮೋದಿ ವಿರುದ್ಧ ಕೀಳು ಹೇಳಿಕೆ ನೀಡಿದ ಮಾಲ್ಡೀವ್ಸ್ ಸಂಸದ ಮತ್ತು ಸಚಿವರ ಹೇಳಿಕೆಗಳನ್ನು ಬಲವಾಗಿ ಖಂಡಿಸುತ್ತೇವೆ.
ಭಾರತವು ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಗಮನಾರ್ಹ ಕೊಡುಗೆ ನೀಡಿದೆ. ಪ್ರವಾಸೋದ್ಯಮ ಕುಸಿದಿದ್ದ ಕೋವಿಡ್ ಸಾಂಕ್ರಾಮಿಕ ವೇಳೆ ನಮ್ಮ ಚೇತರಿಕೆಗೆ ಭಾರತೀಯರು ನೆರವಾಗಿದ್ದಾರೆ. ಭಾರತವು ಮಾಲ್ಡೀವ್ಸ್‌ನ ಉತ್ತಮ ಮಾರುಕಟ್ಟೆಯಾಗಿದ್ದು ನಮ್ಮ ನೆರೆಯ ಮಿತ್ರರಾಷ್ಟ್ರವಾಗಿದೆ’ ಎಂದು ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟೂರಿಸಂ ಇಂಡಸ್ಟ್ರೀ (ಎಮ್‌ಟಿಐ) ತಿಳಿಸಿದೆ.
ಅಲ್ಲದೇ ಇತಿಹಾಸದುದ್ದಕ್ಕೂ ಭಾರತ ಮಾಲ್ಡೀವ್ಸ್‌ನ ಬಿಕ್ಕಟ್ಟಿನ ಸಮಯದಲ್ಲಿ ಸ್ಪಂದಿಸಿದೆ. ಮಾಲ್ಡೀವ್ಸ್ ಜೊತೆಗೆ ಭಾರತ ಮತ್ತು ಭಾರತೀಯರು ಹೊಂದಿರುವ ಸಂಬಂಧಕ್ಕೆ ನಾವು ಕೃತಜ್ಞರಾಗಿದ್ದೇವೆ’ ಎಂದಿದೆ.
ಮುಯಿಜು ವಿರುದ್ಧ ವಿಪಕ್ಷಗಳ ಕೂಗು: ‘ಮಾಲ್ಡೀವ್ಸ್ ಸರ್ಕಾರದ ಸಚಿವರು ಭಾರತ ಹಾಗೂ ಅಲ್ಲಿನ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿ ಉಭಯ ದೇಶಗಳ ಸಂಬಂಧಕ್ಕೆ ಧಕ್ಕೆ ತಂದಿದ್ದಾರೆ’ ಎಂದು ಮಾಲ್ಡೀವ್ಸ್‌ನ ಹಲವಾರು ವಿರೋಧ ಪಕ್ಷದ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೆ, ಹೊಸದಾಗಿ ಚುನಾಯಿತರಾದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಜು ಮತ್ತು ಅವರ ಸಂಪುಟದ ಎಲ್ಲ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಮಂಗಳವಾರ ಮಾತನಾಡಿದ ಮಾಲ್ಡೀವ್ಸ್ ನಾಯಕ ಅಜೀಂ ಅಲಿ, ‘ಹೊಸ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಲು ಅವಿಶ್ವಾಸ ನಿರ್ಣಯ ಮಂಡಿಸಬೇಕು’ ಎಂದು ವಿರೋಧ ಪಕ್ಷದ ನಾಯಕರಿಗೆ ಕರೆ ನೀಡಿದ್ದಾರೆ.
ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಮಾತನಾಡಿ, ‘ಮಾಲ್ಡೀವ್ಸ್ ಸಚಿವರು ಭಾರತದ ವಿರುದ್ಧ ದ್ವೇಷಪೂರಿತ ಭಾಷೆ ಬಳಸುವುದನ್ನು ಖಂಡಿಸುತ್ತೇನೆ. ಭಾರತವು ಯಾವಾಗಲೂ ಮಾಲ್ಡೀವ್ಸ್‌ಗೆ ಉತ್ತಮ ಸ್ನೇಹಿತ ದೇಶ. 2 ದೇಶಗಳ ಹಳೆಯ ಸ್ನೇಹದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುವ ನಿಷ್ಠುರ ಹೇಳಿಕೆಗಳಿಗೆ ನಾವು ಅನುಮತಿಸಬಾರದು’ ಎಂದಿದ್ದಾರೆ.
ಮಾಲ್ಡೀವ್ಸ್ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಪ್ರತಿಕ್ರಿಯಿಸಿ, ‘ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಗಳು ಖಂಡನೀಯ ಮತ್ತು ಅಸಹ್ಯಕರವಾಗಿದೆ’ ಎಂದಿದ್ದಾರೆ.
ಮಾಲ್ಡೀವ್ಸ್‌ನ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಅವರು ‘ಇಂಘ ಘಟನೆಗಳು ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಬೇಕು’ ಎಂದಿದ್ದರೆ, ‘ಭಾರತವು ನಮ್ಮ 911 ಕರೆ ಸಂಖ್ಯೆ (ತುರ್ತು ಕರೆ ಸಂಖ್ಯೆ) ಆಗಿದೆ. ಯಾವಾಗ ನಾವು ಕೋರುತ್ತೇವೋ ಆಗ ನಮ್ಮ ಸಹಾಯಕ್ಕೆ ಭಾರತ ಧಾವಿಸಿದೆ.
ಸ್ನೇಹಿತರ ಬಗ್ಗೆ ಇಂತಹ ಅವಹೇಳನಕಾರಿ ಹೇಳಿಕೆಗಳಿಂದ ಎಲ್ಲರಿಗೂ ದುಃಖವಾಗುತ್ತದೆ’ ಎಂದು ಮಾಲ್ಡೀವ್ಸ್ ಮಾಜಿ ರಕ್ಷಣಾ ಸಚಿವ ಮರಿಯಾ ದೀದಿ ಹೇಳಿದ್ದಾರೆ.
ಮಾಲ್ಡೀವ್ಸ್‌ಗೆ ನಟಿ ಬಿಪಾಶಾ ಪ್ರವಾಸ: ಭಾರಿ ಆಕ್ರೋಶ
ಮಾಲ್ಡೀವ್ಸ್ ಪ್ರವಾಸವನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನ ನಡೆಯುತ್ತಿರುವ ಮಧ್ಯೆಯೇ ಬಾಲಿವುಡ್ ನಟಿ ಬಿಪಾಶಾ ಬಸು ಮಾಲ್ಡೀವ್ಸ್‌ನಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಲಕ್ಷದ್ವೀಪದಲ್ಲಿ ಹೊಸ ಏರ್‌ಪೋರ್ಟ್‌ಗೆ ಕೇಂದ್ರ ಚಿಂತನೆ
ಭಾರತದ ಲಕ್ಷದ್ವೀಪದ ದ್ವೀಪಗಳನ್ನು ಮಾಲ್ಡೀವ್ಸ್‌ಗೆ ಪರ್ಯಾಯ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಬೇಕು ಎಂಬ ಕೂಗಿನ ನಡುವೆಯೇ ದ್ವೀಪದಲ್ಲಿ ಹೊಸ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.