ಯಾವ ಭಾರತೀಯ ಸೈನಿಕರಿಗೂ ದೇಶದಲ್ಲಿ ಜಾಗವಿಲ್ಲ: ಮಾಲ್ಡೀವ್ಸ್‌ ಅಧ್ಯಕ್ಷ

| Published : Mar 06 2024, 02:22 AM IST / Updated: Mar 06 2024, 10:20 AM IST

Maldives
ಯಾವ ಭಾರತೀಯ ಸೈನಿಕರಿಗೂ ದೇಶದಲ್ಲಿ ಜಾಗವಿಲ್ಲ: ಮಾಲ್ಡೀವ್ಸ್‌ ಅಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಮೇ 10ರೊಳಗೆ ಸಂಪೂರ್ಣ ನಿರ್ಗಮಿಸಿ ಎಂದು ಭಾರತ ಸೇನೆಗೆ ಮಾಲ್ಡೀವ್ಸ್‌ ಗಡುವು ನೀಡಿದೆ. ಚೀನಾ ಜತೆಗಿನ ಸೇನಾ ಒಪ್ಪಂದ ಬೆನ್ನಲ್ಲೇ ಅಧ್ಯಕ್ಷ ಮುಯಿಜು ಹೊಸ ಕಿರಿಕ್‌ ಮಾಡಿದ್ದಾರೆ.

ಪಿಟಿಐ ಮಾಲೆ (ಮಾಲ್ಡೀವ್ಸ್‌)

ಭಾರತದ ವಿರುದ್ಧ ತಮ್ಮ ‘ಸಮರ’ ಮುಂದುವರಿಸಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು, ‘ಮೇ 10 ರ ನಂತರ ಯಾವುದೇ ಭಾರತೀಯ ಮಿಲಿಟರಿ ಸಿಬ್ಬಂದಿ ದೇಶದಲ್ಲಿ ಇರಕೂಡದು. 

ಮಾತ್ರವಲ್ಲ ನಾಗರಿಕ ಉಡುಪಿನಲ್ಲಿರುವ ಭಾರತೀಯ ಅಧಿಕಾರಿಗಳೂ ನಮ್ಮ ದೇಶದಲ್ಲ ಇರತಕ್ಕದ್ದಲ್ಲ’ ಎಂದು ಆದೇಶ ಹೊರಡಿಸಿದ್ದಾರೆ.

ಚೀನಾದಿಂದ ಮಾಲ್ಡೀವ್ಸ್ ಸೋಮವಾರವಷ್ಟೇ ಉಚಿತ ಸೇನಾ ನೆರವು ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಅದು ಹೊಸ ವರಸೆ ತೆಗೆದಿದೆ. 

ಭಾರತ ವಿರೋಧಿ ಚೀನಾ ಆಪ್ತರಾಗಿರುವ ಮುಯಿಜು ಅವರ ಈ ಸೂಚನೆಯು ಮೋದಿ ಸರ್ಕಾರ ಹಾಗೂ ದ್ವೀಪ ರಾಷ್ಟ್ರದ ಸಂಬಂಧವನ್ನು ಸಂಪೂರ್ಣ ಹದಗೆಡಿಸುವ ಸಾಧ್ಯತೆ ಇದೆ.

ಮಾಲ್ಡೀವ್ಸ್‌ ಭದ್ರತಾ ಸಿಬ್ಬಂದಿಗೆ ಸಹಾಯ ಮಾಡಲೆಂದು ದಶಕಗಳಿಂದ ಇರುವ 88 ಭಾರತೀಯ ಸೇನಾ ಸಿಬ್ಬಂದಿಯು ಮಾಲ್ಡೀವ್ಸ್‌ನಿಂದ ಮಾರ್ಚ್‌ 10ರೊಳಗೆ ನಿರ್ಗಮಿಸಬೇಕು ಎಂದು ಕೆಲವು ದಿನಗಳ ಹಿಂದೆ ಮುಯಿಜು ಸೂಚಿಸಿದ್ದರು. 

ಪ್ರವಾಸೋದ್ಯಮ ವಿಷಯದಲ್ಲಿ ಭಾರತದೊಂದಿಗೆ ಮಾಲ್ಡೀವ್ಸ್‌ ಸಂಘರ್ಷಕ್ಕಿಳಿದ ತರುವಾಯ ಈ ಸೂಚನೆ ಹೊರಬಿದ್ದಿತ್ತು.ಇದಾದ ನಂತರ ಭಾರತವು ತನ್ನ ಸೇನಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳಲು ಒಪ್ಪಿತ್ತು. 

ಆದರೆ ಅದರ ಬದಲು ಸೇನೆಯಲ್ಲಿನ ನಾಗರಿಕ ವಿಭಾಗದ ಅಧಿಕಾರಿಗಳನ್ನು 1 ವಾರದ ಹಿಂದೆ ಅಲ್ಲಿಗೆ ಕಳಿಸಿತ್ತು.ಇದರ ವಿರುದ್ಧ ಮಂಗಳವಾರ ಭಾಷಣವೊಂದರಲ್ಲಿ ಗುಡುಗಿರುವ ಮುಯಿಜು, ‘ಭಾರತೀಯರು ನಮ್ಮ ಸೂಚನೆ ಹೊರತಾಗಿಯೂ ನಿರ್ಗಮಿಸಲು ಸಿದ್ಧರಿಲ್ಲ. 

ತಮ್ಮ ಸೇನಾ ಸಮವಸ್ತ್ರ ಬಿಚ್ಚಿಟ್ಟು ನಾಗರಿಕ ಉಡುಪು ಹಾಕಿಕೊಂಡು ಮಾರು ವೇಷದಲ್ಲಿ ಬರುತ್ತಿದ್ದಾರೆ. ಆದರೆ ಇದಕ್ಕೆ ನಾನು ಅವಕಾಶ ನೀಡುವುದಿಲ್ಲ. ಮೇ 10ರಿಂದ ದೇಶದಲ್ಲಿ ಯಾವುದೇ ಭಾರತೀಯ ಪಡೆಗಳು ಇರಕೂಡದು. 

ಅದು ಸಮವಸ್ತ್ರಧಾರಿ ಭಾರತೀಯ ಸೇನಾ ಸಿಬ್ಬಂದಿಯೇ ಇರಲಿ. ಅಥವಾ ನಾಗರಿಕ ಉಡುಪಿನಲ್ಲಿನ ಭಾರತೀಯಸಿಬ್ಬಂದಿಯೇ ಇರಲಿ. ಅವರಾರೂ ಮಾಲ್ಡೀವ್ಸ್‌ನಲ್ಲಿ ಅಂದಿನಿಂದ ಇಲ್ಲಿ ನೆಲೆಸುವುದಿಲ್ಲ ಎಂದು ವಿಶ್ವಾಸದಿಂದ ಹೇಳುತ್ತೇನೆ ಎಂದರು.