ಹೆಚ್ಚೆಚ್ಚು ಪ್ರವಾಸಿಗರ ಕಳಿಸಿ: ಚೀನಾಕ್ಕೆ ಮಾಲ್ಡೀವ್ಸ್‌ ಮೊರೆ

| Published : Jan 10 2024, 01:45 AM IST / Updated: Jan 10 2024, 05:39 PM IST

ಹೆಚ್ಚೆಚ್ಚು ಪ್ರವಾಸಿಗರ ಕಳಿಸಿ: ಚೀನಾಕ್ಕೆ ಮಾಲ್ಡೀವ್ಸ್‌ ಮೊರೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯರ ಪೆಟ್ಟಿನ ಬಳಿಕ ಮಾಲ್ಡೀವ್ಸ್‌ ಕಂಗಾಲಾಗಿದ್ದು ಚೀನಾ ಬಳಿ ಪ್ರವಾಸಿಗರಿಗಾಗಿ ಮುಯಿಝು ಬೇಡಿಕೆ ಇಟ್ಟಿದ್ದಾರೆ. ಜೊತೆಗೆಯೀಸ್‌ ಮೈಟ್ರಿಪ್‌ ಕ್ಷಮಾ ಪತ್ರ ಬರೆದಿದೆ. ಅಲ್ಲದೆ ಮಾಲ್ಡೀವ್ಸ್‌ ಪ್ರವಾಸವನ್ನು ಒಂದೇ ದಿನ 14,000 ಮಂದಿ ರದ್ದುಗೊಳಿಸಿದ್ದಾರೆ.

ಬೀಜಿಂಗ್‌: ಭಾರತೀಯರಿಂದ ‘ಬಾಯ್ಕಾಟ್‌ ಮಾಲ್ಡೀವ್ಸ್’ ಅಭಿಯಾನ ಶುರುವಾಗುತ್ತಿದ್ದಂತೆ ಕಂಗೆಟ್ಟಿರುವ ಮಾಲ್ಡೀವ್ಸ್‌ ಸರ್ಕಾರ, ಹೆಚ್ಚು ಹೆಚ್ಚು ಪ್ರವಾಸಿಗರನ್ನು ಕಳುಹಿಸಿಕೊಡಿ ಎಂದು ಚೀನಾ ಸರ್ಕಾರಕ್ಕೆ ಮೊರೆ ಇಟ್ಟಿದೆ.

ತಮ್ಮ ಐದು ದಿನಗಳ ಚೀನಾ ಪ್ರವಾಸದ ಎರಡನೇಯ ದಿನವಾದ ಮಂಗಳವಾರದಂದು ಫುಜಿಯಾನ್‌ನಲ್ಲಿ ಮಾಲ್ಡೀವ್ಸ್ ಬ್ಯುಸಿನೆಸ್ ಫೋರಂನಲ್ಲಿ ಭಾಷಣ ಮಾಡಿದ ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಜು ‘ಚೀನಾವನ್ನು ತಮ್ಮ ಹತ್ತಿರದ ಮಿತ್ರ ಎಂದು ಕರೆದಿದ್ದಾರೆ. ಅಲ್ಲದೇ ಮಾಲ್ಡೀವ್ಸ್‌ಗೆ ತಮ್ಮ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸಿಕೊಡುವಂತೆ ಚೀನಾಕ್ಕೆ ಮನವಿ ಮಾಡಿದ್ದಾರೆ.

ಜೊತೆಗೆ, ‘ಚೀನಾ ನಮ್ಮ ಮಿತ್ರ ರಾಷ್ಟ್ರಗಳಲ್ಲಿ ಒಂದಾಗಿದ್ದು ಅಭಿವೃದ್ಧಿ ಪಾಲುದಾರರಲ್ಲಿಯೂ ಪ್ರಮುಖವಾಗಿದೆ. ಕೋವಿಡ್‌ ಪೂರ್ವದಲ್ಲಿ ಚೀನಾ ನಮ್ಮ (ಮಾಲ್ಡೀವ್ಸ್)ನ ನಂ.1 ಮಾರುಕಟ್ಟೆಯಾಗಿತ್ತು. ಇದನ್ನು ಮರಳಿ ಪಡೆಯಲು ನಾವು ನಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕು ಎಂಬುದು ನನ್ನ ವಿನಂತಿಯಾಗಿದೆ ಎಂದಿದ್ದಾರೆ. ಇದೇ ವೇಳೆ ಚೀನಾದ ಯೋಜನೆಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈಸ್‌ ಮೈ ಟ್ರಿಪ್‌ ಸಂಸ್ಥೆಗೆ ಮಾಲ್ಡೀವ್ಸ್‌ ಕ್ಷಮೆ ಪತ್ರ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಕೀಳು ಹೇಳಿಕೆ ನೀಡಿದ್ದ ಬೆನ್ನಲ್ಲೇ ಮಾಲ್ಡೀವ್ಸ್‌ ಪ್ರವಾಸ ರದ್ದು ಮಾಡಿದ್ದ ಭಾರತದ ಟೂರಿಸಂ ಸಂಸ್ಥೆ ‘ಈಸ್‌ ಮೈ ಟ್ರಿಪ್‌’ಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಕ್ಷಮೆ ಕೋರಿ ಮಾಲ್ಡೀವ್ಸ್‌ ಪತ್ರ ಬರೆದಿದೆ. 

ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಂಸ್ಥೆಯಾದ ‘ಮಾಲ್ಡೀವ್ಸ್‌ ಅಸೋಸಿಯೇಷನ್‌ ಆಫ್‌ ಟ್ರಾವೆಲ್‌ ಏಜೆಂಟ್ಸ್‌’ (ಎಮ್‌ಎಟಿಎಟಿಒ) ಈಸ್‌ ಮೈ ಟ್ರಿಪ್‌ ಸಂಸ್ಥೆಯ ಸಿಇಒಗೆ ಪತ್ರ ಬರೆದು ಪ್ರಮಾಣಿಕ ಕ್ಷಮೆ ಕೋರಿದೆ. ಅಲ್ಲದೇ ಸೌಹಾರ್ದತೆಯಿಂದ ಇರುವಂತೆ ಕೋರಿ ಮಾಲ್ಡೀವ್ಸ್‌ ಪ್ರವಾಸ ನಿಷೇಧವನ್ನು ರದ್ದುಗೊಳಿಸುವಂತೆ ಕೋರಿದೆ.

ಮಾಲ್ಡೀವ್ಸ್‌ಗೆ 14 ಸಾವಿರ ಹೋಟೆಲ್‌ ಬುಕ್ಕಿಂಗ್ ರದ್ದು?
ಪ್ರವಾಸೋದ್ಯಮ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಮನಬಂದಂತೆ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಭಾರತದಲ್ಲಿ ಆರಂಭವಾಗಿದ್ದ ‘ಬಾಯ್ಕಾಟ್‌ ಮಾಲ್ಡೀವ್ಸ್‌’ ಆಂದೋಲನ ಮತ್ತಷ್ಟು ಚುರುಕು ಪಡೆದಿದೆ. 

ಸಾವಿರಾರು ಭಾರತೀಯರು ತಮ್ಮ ಮಾಲ್ಡೀವ್ಸ್‌ ಪ್ರವಾಸ ರದ್ದು ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಸಂದೇಶ ಹರಿದಾಡತೊಡಗಿವೆ.

‘ಒಂದೇ ದಿನದಲ್ಲಿ ಭಾರತೀಯರು ಮಾಲ್ಡೀವ್ಸ್‌ನಲ್ಲಿ ಸುಮಾರು 14000 ಹೋಟೆಲ್‌ಗಳನ್ನು ಬುಕ್ ಮಾಡಿದ್ದಾರೆ ಮತ್ತು 3600 ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದಾರೆ ಎಂದು ಗೊತ್ತಾಗಿದೆ. ಇದು ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಎಂದು ಸಾಬೀತಾಗಿದೆ’ ಎಂದು ಟೈಮ್ಸ್‌ ಅಲಜೀಬ್ರಾ ಎಂಬ ಟ್ವೀಟರ್‌ ಖಾತೆ ಪೋಸ್ಟ್‌ ಮಾಡಿದೆ.