ಸಾರಾಂಶ
ಟೆಲ್ ಅವಿವ್: ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಹತ್ಯೆಗೀಡಾದ ಬೆನ್ನಲ್ಲೇ, ಹಮಾಸ್ ಹಾಗೂ ಇಸ್ರೇಲ್ ನಡುವಿನ ಈಗಿನ ಸಂಘರ್ಷಕ್ಕೆ ಮೂಲ ಕಾರಣವಾಗಿದ್ದ ಅಕ್ಟೋಬರ್ 7ರ ಹತ್ಯಾಕಾಂಡದ ರೂವಾರಿ, ಹಮಾಸ್ ಮಿಲಿಟರಿ ವಿಭಾಗದ ಮುಖ್ಯಸ್ಥ ಮೊಹಮ್ಮದ್ ಡೈಫ್‌ನನ್ನು ಹತ್ಯೆಗೈದಿರುವುದಾಗಿ ಇಸ್ರೇಲ್ ಪ್ರಕಟಿಸಿದೆ. ತನ್ಮೂಲಕ, ಕಳೆದ ವರ್ಷ ಜಗತ್ತೇ ಬೆಚ್ಚಿಬೀಳುವ ರೀತಿಯಲ್ಲಿ ಇಸ್ರೇಲ್‌ಗೆ ಸೇನೆ ನುಗ್ಗಿಸಿ 1197 ಇಸ್ರೇಲಿಗರ ಸಾವಿಗೆ ಕಾರಣವಾಗಿದ್ದ ದಾಳಿಯ ಮಾಸ್ಟರ್ ಮೈಂಡ್ ಕೂಡ ಮೃತಪಟ್ಟಂತಾಗಿದೆ.
ಮೊಹಮ್ಮದ್ ಡೈಫ್‌ನನ್ನು ಜು.13ರಂದೇ ಹತ್ಯೆಗೈದಿರುವುದಾಗಿ ಇಸ್ರೇಲಿ ಸೇನೆ ಹೇಳಿಕೊಂಡಿದೆ. ‘ಜು.13ರಂದು ಇಸ್ರೇಲಿ ಫೈಟರ್ ಜೆಟ್‌ಗಳು ಖಾನ್ ಯೂನಿಸ್ ಮೇಲೆ ಬಾಂಬ್ ದಾಳಿ ನಡೆಸಿದ್ದವು. ಆ ದಾಳಿಯಲ್ಲಿ ಮೊಹಮ್ಮದ್ ಡೈಫ್‌ನನ್ನು ಹತ್ಯೆಗೈಯಲಾಗಿದೆ. ಕಳೆದ ವರ್ಷದ ಅ.7ರಂದು ನಡೆದ ಹತ್ಯಾಕಾಂಡವನ್ನು ಡೈಫ್ ಯೋಜಿಸಿ, ಜಾರಿಗೊಳಿಸಿದ್ದ’ ಎಂದು ಗುರುವಾರ ಇಸ್ರೇಲ್ ಸೇನೆ ತಿಳಿಸಿದೆ.
ಆದರೆ, ಜು.13ರಂದು ಗಾಜಾ ಮೇಲೆ ನಡೆದ ದಾಳಿಯಲ್ಲಿ 90 ಜನರು ಮೃತಪಟ್ಟಿದ್ದು, ಅವರಲ್ಲಿ ಡೈಫ್ ಸೇರಿಲ್ಲ ಎಂದು ಹಮಾಸ್ ಹೇಳಿಕೊಂಡಿದೆ. ಡೈಫ್, ಹಮಾಸ್ ಸೇನೆಯ ಪ್ರಮುಖ ಕಮಾಂಡರ್‌ಗಳಲ್ಲಿ ಒಬ್ಬನಾಗಿದ್ದ.