ಸಾರಾಂಶ
ವಾಷಿಂಗ್ಟನ್: ಭೂಮಿಗೆ ಮರಳಲು ನೌಕೆ ಲಭ್ಯವಿಲ್ಲದ ಕಾರಣ 150 ದಿನಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಆರೋಗ್ಯದ ಕುರಿತು ಮತ್ತೆ ನಾನಾ ವದಂತಿಗಳು ಹಬ್ಬಿವೆ.
ಸುನಿತಾ ಸುರಕ್ಷಿತವಾಗಿದ್ದಾರೆ ಎಂದು ಇತ್ತೀಚೆಗೆ ನಾಸಾ ಸ್ಪಷ್ಟನೆ ನೀಡಿತ್ತಾದರೂ, ಇತ್ತೀಚೆಗೆ ಬಿಡುಗಡೆಯಾದ ಬಾಹ್ಯಾಕಾಶ ಕೇಂದ್ರದಲ್ಲಿನ ಸುನಿತಾ ಫೋಟೋ ಭಾರೀ ಆತಂಕಕ್ಕೆ ಕಾರಣವಾಗಿದೆ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಸುನಿತಾ ಭಾರೀ ತೂಕ ಕಳೆದುಕೊಂಡಿದ್ದಾರೆ. ಹೀಗಾಗಿ ಗುರುತೇ ಸಿಗದಷ್ಟು ತೆಳ್ಳಗಾಗಿರುವುದು ಫೋಟೋದಲ್ಲಿ ಕಂಡುಬಂದಿದೆ.
ಅನಾರೋಗ್ಯ?:
ಫೋಟೋ ಕುರಿತು ಪ್ರತಿಕ್ರಿಯೆ ನೀಡಿರುವ ಹಲವು ವೈದ್ಯರು, ಸುನಿತಾ ತೂಕದಲ್ಲಿ ಭಾರೀ ನಷ್ಟವಾಗಿದೆ. ಕೆನ್ನೆಗಳು ಗುಳಿ ಬಿದ್ದಿವೆ. ದೇಹದಲ್ಲಿ ಚರ್ಮ, ಮೂಳೆಗಳು ಮಾತ್ರವೇ ಉಳಿದಿವೆ ಅತ್ಯಂತ ಎತ್ತರದ ಪ್ರದೇಶದಲ್ಲಿ ವಾಸಿಸುವ ವೇಳೆ ಉಂಟಾಗುವ ಸಮಸ್ಯೆ ಇದು. ದೈಹಿಕವಾಗಿ ಒತ್ತಡಕ್ಕೆ ಒಳಗಾದ ದೇಹ ಈ ರೀತಿ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದ್ದಾರೆ.
ಸುನಿತಾಗೆ ಏನಾಗಿರಬಹುದು?:
ಸುನಿತಾ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ವೇಳೆಯಲ್ಲಿ 63 ಕೇಜಿಯಿದ್ದರು. ಆದರೆ ಅಲ್ಲಿ ಸರಿಯಾದ ಪ್ರಮಾಣದಲ್ಲಿ ಪೌಷಕಾಂಶಯುಕ್ತ ಆಹಾರ ಸಿಗದ ಕಾರಣಕ್ಕೆ ತೂಕ ಕಳೆದುಕೊಂಡಿದ್ದಾರೆ. ಅಲ್ಲಿ ತೂಕವನ್ನು ಕಾಪಾಡಿಕೊಳ್ಳಲು 3500 ರಿಂದ 4000ದ ತನಕ ಕ್ಯಾಲೋರಿಗಳಿರುವ ಆಹಾರವನ್ನು ಸೇವಿಸಬೇಕಿದೆ. ಅದು ಸಾಧ್ಯವಾಗದ ಕಾರಣ ವೇಗವಾಗಿ ತೂಕ ನಷ್ಟವಾಗುತ್ತಿದೆ. ಬಾಹ್ಯಾಕಾಶದಲ್ಲಿ ಸ್ನಾಯುಗಳು ಮತ್ತು ಮೂಳೆಗಳನ್ನು ದೃಢವಾಗಿರಿಸಿ ಇಡಲು 2 ಗಂಟೆಗಳ ವ್ಯಾಯಾಮದ ಅವಶ್ಯಕತೆ ಕೂಡ ಇರುತ್ತದೆ. ಅದು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ದಿನಕ್ಕೆ 16 ಸಲ ಸೂರ್ಯೋದಯ, ಸೂರ್ಯಾಸ್ತ ನೋಡುವ ಸುನಿತಾ!
ವಾಷಿಂಗ್ಟನ್: ಭೂಮಿಯ ಮೇಲಿರುವವರು ನಿತ್ಯ 1 ಸೂರ್ಯೋದಯ ಹಾಗೂ 1 ಸೂರ್ಯಾಸ್ತ ನೋಡುತ್ತಾರೆ. ಆದರೆ ಭಾರತ ಮೂಲದ ನಾಸಾ ಗಗನಯಾನಿ ಸುನಿತಾ ವಿಲಿಯಮ್ಸ್ ಹಾಗೂ ಅವರ ಜತೆಗೆ ಇರುವ ಇತರ ಗಗನಯಾನಿಗಳು ನಿತ್ಯ 16 ಸೂರ್ಯೋದಯ ಹಾಗೂ ಸೂರ್ಯಾಸ್ತಗಳನ್ನು ನೋಡುತ್ತಾರೆ!!ಅಚ್ಚರಿ ಎನ್ನಿಸಿದರೂ ಇದು ನಿಜ. ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಕೇವಲ 24 ಗಂಟೆಗಳ ಅವಧಿಯಲ್ಲಿ 16 ಸೂರ್ಯೋದಯಗಳು ಮತ್ತು ಸೂರ್ಯಾಸ್ತಗಳನ್ನು ಕಾಣಬಹುದಾಗಿದೆ.
ಅವರು ಇರುವ ಅಂತರಿಕ್ಷ ಕೇಂದ್ರವು ಭೂಮಿಯ ಸುತ್ತ ಸುತ್ತುವ ಗಮನಾರ್ಹ ವೇಗದಿಂದಾಗಿ ಇದು ಸಂಭವಿಸುತ್ತದೆ.ಅಂತರಿಕ್ಷ ಕೇಂದ್ರವು ಗಂಟೆಗೆ ಸರಾಸರಿ 28 ಸಾವಿರ ಕಿ.ಮೀ. ವೇಗದಲ್ಲಿ ಸುತ್ತುತ್ತದೆ. ಅಂದರೆ ಅದು ಪ್ರತಿ 90 ನಿಮಿಷಗಳಿಗೊಮ್ಮೆ (ಒಂದೂವರೆ ತಾಸಿಗೆ ಒಮ್ಮೆ) ನಮ್ಮ ಗ್ರಹದ ಸುತ್ತ ಪೂರ್ಣ ಕಕ್ಷೆಯನ್ನು ಪೂರ್ಣಗೊಳಿಸುತ್ತದೆ. ಪ್ರತಿ ಬಾರಿ ಅದು ಹೀಗೆ ಮಾಡಿದಾಗಲೂ ಒಮ್ಮೆ ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಅಲ್ಲಿಂದ ಕಾಣಬಹುದು. ಹೀಗಾಗಿ ಕೇವಲ 24 ತಾಸಿನಲ್ಲಿ ಅಂತರಿಕ್ಷ ಕೇಂದ್ರದಿಂದ ಸೂರ್ಯ ಉದಯ-ಅಸ್ತ ಗೋಚರಿಸುತ್ತವೆ.
ಈ ಬಗ್ಗೆ 2013ರಲ್ಲಿ ಗುಜರಾತ್‌ಗೆ ಬಂದಿದ್ದ ಸುನಿತಾ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸಮ್ಮುಖದಲ್ಲಿ ಮಾತನಾಡಿ ‘ನಾನು ನಿತ್ಯ 16 ಸೂರ್ಯೋದಯಗಳು ಮತ್ತು 16 ಸೂರ್ಯಾಸ್ತಗಳನ್ನು ನೋಡಿದ ಅದೃಷ್ಟಶಾಲಿ’ ಎಂದಿದ್ದರು..