ಬ್ರಹ್ಮಾಂಡದ ಅತಿಪ್ರಕಾಶಮಾನ ವಸ್ತು ಪತ್ತೆ

| Published : Feb 21 2024, 02:00 AM IST / Updated: Feb 21 2024, 07:55 AM IST

Universe

ಸಾರಾಂಶ

ಸೂರ್ಯನಿಗಿಂತ 1700 ಕೋಟಿ ಪಟ್ಟು ದೊಡ್ಡ, 500 ಲಕ್ಷ ಕೋಟಿ ಪಟ್ಟು ಪ್ರಖರವಾದ ವಸ್ತು ಬ್ರಹ್ಮಾಂಡದಲ್ಲಿ ಪತ್ತೆಯಾಗಿದೆ.

ನವದೆಹಲಿ: ಬ್ರಹ್ಮಾಂಡದಲ್ಲಿ ಅತ್ಯಂತ ಪ್ರಕಾಶಮಾನವಾದ ಕಾಯವೊಂದನ್ನು ಖಗೋಳ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದು, ಇದು ಸೂರ್ಯನಿಗಿಂತ 500 ಲಕ್ಷ ಕೋಟಿ ಪಟ್ಟು ಪ್ರಕಾಶಮಾನವಾಗಿದೆ. 

ಅಲ್ಲದೇ ಇದು ಸೂರ್ಯನಿಗಿಂತ 1700 ಕೋಟಿ ಪಟ್ಟು ದೊಡ್ಡದಾಗಿದೆ ಎಂದು ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾದ ವಿಜ್ಞಾನಿಗಳ ನೇತೃತ್ವದ ತಂಡ ಈ ಪ್ರಕಾಶಮಾನವಾದ ವಸ್ತುವನ್ನು ಪತ್ತೆ ಹಚ್ಚಿದ್ದು, ಇದೊಂದು ಬ್ಲಾಕ್‌ಹೋಲ್‌ ಎಂದು ಹೇಳಿದೆ.

ಈ ಬ್ಲಾಕ್‌ಹೋಲ್‌ನ ಶಕ್ತಿಯಿಂದಲೇ ಅದರ ಸುತ್ತಲಿನ ಪ್ರದೇಶ ಇಷ್ಟೊಂದು ಪ್ರಮಾಣದಲ್ಲಿ ಪ್ರಕಾಶಿಸುತ್ತಿದೆ. ಇದು ಬಾಹ್ಯಾಕಾಶದಲ್ಲಿರುವ ಸುಂಟರಗಾಳಿಯಾಗಿದ್ದು, ಪ್ರತಿನಿತ್ಯ ಒಂದು ಸೂರ್ಯನನ್ನು ಕಬಳಿಸುತ್ತಾ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

1980ರಲ್ಲೇ ಯುರೋಪಿಯನ್‌ ಸದರ್ನ್‌ ಅಬ್ಸರ್ವೇಟರಿ ಇದನ್ನು ಪತ್ತೆ ಮಾಡಿತ್ತು. ಅಲ್ಲದೇ ಇದನ್ನು ನಕ್ಷತ್ರ ಎಂದು ಗುರುತಿಸಿತ್ತು. ಆದರೆ ಇದು ನಕ್ಷತ್ರವಲ್ಲ ಎಂದು ಈ ವಿಜ್ಞಾನಿಗಳ ತಂಡ ಸ್ಪಷ್ಟಪಡಿಸಿದೆ. 

ಇದು ಭೂಮಿಯಿಂದ 1200 ಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿದ್ದು, ಬ್ರಹ್ಮಾಂಡ ರಚನೆಯಾದ ಸಮಯದಿಂದಲೂ ಇದರ ಅಸ್ತಿತ್ವವಿದೆ ಎನ್ನಲಾಗಿದೆ.