ಸಾರಾಂಶ
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಆಪ್ತ ಸಿಮ್ರನ್‌ಜೀತ್ ಮನೆಗೆ ನಡೆದ ಗುಂಡಿನ ದಾಳಿಯಲ್ಲಿ ಪ್ರಾಣಾಪಾಯದಿಂದ ಕುಟುಂಬಸ್ಥರು ಪಾರು ಆಗಿದ್ದಾರೆ.
ಟೊರೊಂಟೊ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಆಪ್ತ ಎನ್ನಲಾದ ಸಿಮ್ರನ್‌ಜೀತ್ ಸಿಂಗ್ ಮನೆಗೆ ದುಷ್ಕರ್ಮಿಗಳು ಗುರುವಾರ ಮುಂಜಾನೆ ಗುಂಡಿನ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಸಿಮ್ರನ್‌ಜೀತ್ ಕುಟುಂಬಸ್ಥರಿಗೆ ಯಾವುದೇ ಪ್ರಾಣಾಪಾಯ ಆಗದಿದ್ದರೂ ಅವರ ಮನೆಯ ಮುಂದೆ ನಿಂತಿದ್ದ ಕಾರಿಗೆ ತೀವ್ರ ಹಾನಿಯಾಗಿದೆ. ಮನೆಯ ಗೋಡೆಗಳ ಮೇಲೆ ಗುಂಡಿನ ದಾಳಿಯಿಂದ ತೂತುಗಳಾಗಿವೆ ಎಂದು ಕೆನಡಾ ಪೊಲೀಸರು ತಿಳಿಸಿದ್ದಾರೆ. ಜೊತೆಗೆ ತನಿಖೆಯು ಆರಂಭಿಕ ಹಂತದಲ್ಲಿದ್ದು, ಘಟನೆಗೆ ನಿಖರ ಕಾರಣದ ಕುರಿತು ಇನ್ನೂ ತಿಳಿದು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ ಬ್ರಿಟಿಷ್ ಕೊಲಂಬಿಯಾ ಗುರುದ್ವಾರ ಕೌನ್ಸಿಲ್‌ನ ವಕ್ತಾರ ಮೋನಿಂದರ್ ಸಿಂಗ್, ‘ಸಿಮ್ರನ್‌ಜೀತ್ ಕಳೆದ ಜ.26ರಂದು ವ್ಯಾಂಕೋವರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮುಂದೆ ಖಲಿಸ್ತಾನಿಗಳ ಪರವಾಗಿ ಪ್ರತಿಭಟನೆ ಆಯೋಜಿಸಿದ್ದನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.