ಸಾರಾಂಶ
ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ರಿಪಬ್ಲಿಕನ್ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ನಿಕ್ಕಿ ಹ್ಯಾಲೆ ಹಿಂದೆ ಸರಿಯುವುದರೊಂದಿಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾದಂತಾಗಲಿದೆ.
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗುವ ಪ್ರಯತ್ನದಲ್ಲಿದ್ದ ಭಾರತೀಯ ಸಂಜಾತೆ ನಿಕ್ಕಿ ಹ್ಯಾಲೆ, ರೇಸ್‌ನಿಂದ ಹಿಂದೆ ಸರಿದಿದ್ದಾರೆ.
ಹೀಗಾಗಿ ಅಭ್ಯರ್ಥಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾದಿ ಇನ್ನಷ್ಟು ಸುಗಮವಾಗಿದೆ.ಭಾನುವಾರ ಮತ್ತು ಮಂಗಳವಾರದಂದು ಅಮೆರಿಕದ ಕೆಲವು ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಮುನ್ನಡೆ ಸಾಧಿಸಿದ್ದ ನಿಕ್ಕಿ ಹ್ಯಾಲೆ ಬುಧವಾರ ದಿಢೀರನೆ ತಮ್ಮ ನಿರ್ಧಾರ ಪ್ರಕಟಿಸಿರುವುದಕ್ಕೆ ಸೂಕ್ತ ಕಾರಣ ತಿಳಿಸಿಲ್ಲವಾದರೂ ಭವಿಷ್ಯದಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಯಾಗಲು ಹೊಸ ದಾಳ ಉರುಳಿಸಿದ್ದಾರೆ ಎಂದು ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.