ಅಮೆಜಾನ್‌ ಕಾಡಿಗೆ ಸ್ಕೆಚ್‌ ಹಾಕಿದ್ದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದಗೆ ಹೊಡೀತು ಶಾಕ್‌!

| N/A | Published : Mar 26 2025, 01:36 AM IST / Updated: Mar 26 2025, 08:42 AM IST

ಸಾರಾಂಶ

ಈ ಹಿಂದೆ ಪ್ರತ್ಯೇಕ ಕೈಲಾಸ ದೇಶವನ್ನು ಸೃಷ್ಟಿ ಮಾಡಿದ್ದೇನೆ ಎಂದು ಹೇಳಿ ಮೂಲಕ ಇಡೀ ಜಗತ್ತಿಗೆ ಮಂಕುಬೂದಿ ಎರಚಲು ಯತ್ನಿಸಿದ್ದ ಕರ್ನಾಟಕದ ರಾಮನಗರ ಜಿಲ್ಲೆ ಬಿಡದಿಯ ವಿವಾದಾತ್ಮಕ ಸ್ವಯಂ ಘೋಷಿತ ದೇವಮಾನವ ಇದೀಗ ನಿತ್ಯಾನಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ.

 ನವದೆಹಲಿ: ಈ ಹಿಂದೆ ಪ್ರತ್ಯೇಕ ಕೈಲಾಸ ದೇಶವನ್ನು ಸೃಷ್ಟಿ ಮಾಡಿದ್ದೇನೆ ಎಂದು ಹೇಳಿ ಮೂಲಕ ಇಡೀ ಜಗತ್ತಿಗೆ ಮಂಕುಬೂದಿ ಎರಚಲು ಯತ್ನಿಸಿದ್ದ ಕರ್ನಾಟಕದ ರಾಮನಗರ ಜಿಲ್ಲೆ ಬಿಡದಿಯ ವಿವಾದಾತ್ಮಕ ಸ್ವಯಂ ಘೋಷಿತ ದೇವಮಾನವ ಇದೀಗ ನಿತ್ಯಾನಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಅಮೆಜಾನ್‌ ಕಾಡಿನಲ್ಲಿರುವ ದಕ್ಷಿಣ ಅಮೆರಿಕದ ಬೊಲಿವಿಯಾ ದೇಶದಲ್ಲಿ ಆದಿವಾಸಿಗಳ 3900 ಚದರ ಕಿ..ಮೀ. ಭೂಮಿಯನ್ನು ಕಬಳಿಸಲು ಯತ್ನಿಸಿದ್ದಾನೆ. ಆದರೆ ಎಚ್ಚೆತ್ತ ಬೊಲಿವಿಯಾ ಸರ್ಕಾರ ಈ ಜಮೀನು ಹಂಚಿಕೆ ರದ್ದು ಮಾಡಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ನಿತ್ಯಾನಂದ ಖರೀದಿಸಲು ಯತ್ನಿಸಿದ್ದ ಜಮೀನಿನ ಗಾತ್ರ ದಿಲ್ಲಿ ಗಾತ್ರಕ್ಕಿಂತ 2.6 ಪಟ್ಟು, ಮುಂಬೈನ ಗಾತ್ರಕ್ಕಿಂತ 6.5 ಪಟ್ಟು, ಬೆಂಗಳೂರಿನ ಗಾತ್ರಕ್ಕಿಂತ 5.3 ಪಟ್ಟು ಮತ್ತು ಕೋಲ್ಕತಾದ ಗಾತ್ರಕ್ಕಿಂತ 19 ಪಟ್ಟು ದೊಡ್ಡದಾಗಿದೆ.

‘ನಿತ್ಯಾನಂದ ಮತ್ತು ಅವರ ಶಿಷ್ಯರು ಮೊದಲು ಬೊಲಿವಿಯಾದಲ್ಲಿ ಬುಡಕಟ್ಟು ಜನಾಂಗದವರ ಭೂಮಿಯನ್ನು ವಂಚನೆಯ ಮೂಲಕ ಖರೀದಿಸಿದ್ದರು. ಭೂಮಿಯನ್ನು ಖರೀದಿಸಿದ ನಂತರ, ನಿತ್ಯಾನಂದ ಅದನ್ನು ಕೈಲಾಸದ ವಿಸ್ತರಣೆ ಎಂದು ಘೋಷಿಸಲು ಪ್ರಯತ್ನಿಸಿದ್ದ, ನಂತರ ನಿತ್ಯಾನಂದ ಮತ್ತು ಅವರ ಶಿಷ್ಯರು ಒಟ್ಟಾಗಿ ಬೊಲಿವಿಯಾದ ಅಮೆಜಾನ್‌ ವಲಯದ 3900 ಚದರ ಕಿಲೋ ಮೀಟರ್ ಎಕರೆ ಭೂಮಿಯನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಈ ಭೂಮಿಯನ್ನು 1000 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿತ್ತು. ಭೂಮಿಯ ಗುತ್ತಿಗೆ ಮೊತ್ತವನ್ನು ವಾರ್ಷಿಕ 8.96 ಲಕ್ಷ ರು., ಮಾಸಿಕ ಮೊತ್ತ 74,667 ರು. ಮತ್ತು ದೈನಂದಿನ ಮೊತ್ತ 2,455 ರು. ಎಂದು ಪ್ರಸ್ತಾಪಿಸಲಾಗಿತ್ತು ಎಂದು ಮಾಧ್ಯಮ ವರದಿಗಳು ಹೇಳಿವೆ.

ಎಚ್ಚೆತ್ತ ಬೊಲಿವಿಯಾ, ಒಪ್ಪಂದ ರದ್ದು:

ಬೊಲಿವಿಯಾದ ವಿದೇಶಾಂಗ ಸಚಿವಾಲಯವು ಒಂದು ಹೇಳಿಕೆಯನ್ನು ನೀಡಿದ್ದು, ‘ನಿತ್ಯಾನಂದ ಹೇಳಿಕೊಳ್ಳುವ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಎಂದು ಕರೆಯಲ್ಪಡುವ ತಥಾಕಥಿತ ದೇಶದ ಜತೆ ನಾವು ಸಂಬಂಧ ಹೊಂದಿಲ್ಲ. ಏಕೆಂದರೆ ಅದು ಮಾನ್ಯತೆ ಪಡೆದ ದೇಶವಲ್ಲ. ಹೀಗಾಗಿ ನಿತ್ಯಾನಂದನ ಒಪ್ಪಂದವನ್ನು ಸಂಪೂರ್ಣ ರದ್ದು ಮಾಡಿದ್ದೇವೆ’ ಎಂದಿದೆ. ಅಲ್ಲದೆ, ಈ ಅಕ್ರಮ ವಹಿವಾಟು ನಡೆಸಿದ 20 ನಿತ್ಯಾನಂದನ ಭಕ್ತರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ನಿತ್ಯಾನಂದ ಹೇಗೆ ಆಟ ಆಡಿದ?

ವರದಿಯ ಪ್ರಕಾರ, ‘ವಿದೇಶಿಗರು ಬೊಲಿವಿಯಾದಲ್ಲಿ ಭೂಮಿ ಕೊಳ್ಳಲು ಅನುಮತಿ ಇಲ್ಲ. ಆದರೆ ಸ್ಥಳೀಯರ ಹೆಸರಲ್ಲಿ ಗುಪ್ತವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೈಲಾಸ ಪ್ರತಿನಿಧಿಗಳು ಬೊಲಿವಿಯಾದಲ್ಲಿ ಹಲವಾರು ತಿಂಗಳುಗಳ ಕಾಲ ಸುತ್ತಾಡಿದ್ದರು. ಭೂಮಿಯನ್ನು ವಶಪಡಿಸಿಕೊಳ್ಳಲು ಸ್ಥಳೀಯ ನಾಯಕರ ಸಹಾಯ ಪಡೆಯಲಾಯಿತು. ಒಪ್ಪಂದ ಅಂತಿಮಗೊಂಡ ನಂತರ, ನಿತ್ಯಾನಂದನ ತಂಡವು ಜನರಿಂದ ಒಪ್ಪಿಗೆಯನ್ನೂ ಪಡೆಯಿತು. ಆದರೆ ಮಾಧ್ಯಮಗಳಲ್ಲಿ ವಿಷಯ ಸೋರಿಕೆ ಆಯಿತು. ಆಗ ನಿತ್ಯಾನಂದನ ಶಿಷ್ಯರು ಸ್ಥಳೀಯ ಪತ್ರಕರ್ತರಿಗೆ ಬೆದರಿಕೆ ಹಾಕಿದರು. ಆದರೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾದಾಗ, ಅದು ನಿತ್ಯಾನಂದನ ಈ ಸಂಪೂರ್ಣ ಒಪ್ಪಂದವನ್ನು ರದ್ದುಗೊಳಿಸಿತು‘ ಎಂದು ವರದಿ ಹೇಳಿದೆ.

ನಿತ್ಯಾನಂದ 2019ರಿಂದ ಭಾರತದಿಂದ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದಾನೆ ಮತ್ತು ಅವರ ವಿರುದ್ಧ ಹಲವು ಗಂಭೀರ ಆರೋಪಗಳಿವೆ. ಅವನು ಕೈಲಾಸ ಎಂಬ ನಕಲಿ ರಾಷ್ಟ್ರವನ್ನು ಸ್ಥಾಪಿಸಿದ್ದಾನೆ.

ಬೊಲಿವಿಯಾ ವ್ಯಾಪ್ತಿಯ ಅಮೆಜಾನ್‌ ಕಾಡಲ್ಲಿ 2900 ಚಕಿಮೀ ಭೂಮಿ ಖರೀದಿಗೆ ಆದಿವಾಸಿಗಳ ಜೊತೆ ನಿತ್ಯಾನಂದ ಒಪ್ಪಂದ

ಒಪ್ಪಂದದ ಪ್ರದೇಶ ಬೆಂಗಳೂರಿನ ಗಾತ್ರಕ್ಕಿಂತ 5.3, ಮುಂಬೈ ಗಾತ್ರಕ್ಕಿಂತ 6.5 ಪಟ್ಟು, ಕೋಲ್ಕತಾಕ್ಕಿಂತ 19 ಪಟ್ಟು ಅಧಿಕ

ವಾರ್ಷಿಕ 9 ಲಕ್ಷ ರು.ನಂತೆ 1000 ವರ್ಷಗಳ ಅವಧಿಗೆ ಭೂಮಿ, ಭೂಮಿಯ ಎಲ್ಲಾ ಸಂಪತ್ತು ತಮ್ಮದೆಂದು ನಿತ್ಯಾನಂದ ಡೀಲ್‌

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಒಪ್ಪಂದಕ್ಕೆ ಬೊಲಿವಿಯಾ ತಡೆ. ಆದಿವಾಸಿಗಳ ಜೊತೆ ಒಪ್ಪಂದ ಮಾನ್ಯವಲ್ಲ ಎಂದು ಘೋಷಣೆ