ಸಾರಾಂಶ
ರಿಯಾದ್: ಸೌದಿ ಅರೇಬಿಯಾದ ಮುಸ್ಲಿಮರ ಧರ್ಮಕ್ಷೇತ್ರ ಮೆಕ್ಕಾದಲ್ಲಿ ತಾಪಮಾನ ಅತ್ಯಧಿಕವಾಗಿದ್ದು, ಇದರ ಪರಿಣಾಮ ಹಜ್ ಯಾತ್ರೆಗೆ ತೆರಳಿ ಸಾವನ್ನಪ್ಪಿದವರ ಸಂಖ್ಯೆ 1000 ದಾಟಿದೆ. ಇವರಲ್ಲಿ ಇಬ್ಬರು ಕನ್ನಡಿಗರೂ ಇದ್ದಾರೆ. ಈ ನಡುವೆ ಮೃತಪಟ್ಟ ಭಾರತೀಯರ ಸಂಖ್ಯೆ 90ಕ್ಕೇರಿದೆ. ಮೆಕ್ಕಾದಲ್ಲಿ 49ರಿಂದ 52 ಡಿಗ್ರಿ ತಾಪ ಇದ್ದು, ಬೇಗೆ ತಾಳದೇ ಇವರು ಅಸುನೀಗಿದ್ದಾರೆ.
ಮೃತರ ಪೈಕಿ ನೋಂದಾಯಿಸದ ಯಾತ್ರಾರ್ಥಿಗಳೇ ಹೆಚ್ಚಿದ್ದಾರೆ. ಮೃತರಲ್ಲಿ 658 ಜನ ಈಜಿಪ್ಟ್‌ನವರಾಗಿದ್ದು, ಈ ಪೈಕಿ 630 ಮಂದಿ ಮೆಕ್ಕಾ ಯಾತ್ರೆಗೆ ನೋಂದಣಿ ಮಾಡಿಸಿರಲಿಲ್ಲ. ಉಳಿದಂತೆ ಭಾರತ, ಜೋರ್ಡಾನ್, ಇಂಡೋನೆಷ್ಯಾ, ಇರಾನ್, ಸೆನೆಗಲ್ , ಟ್ಯುನೀಶಿಯಾದ ಯಾತ್ರಿಕರು ಸೇರಿದ್ದಾರೆ. ಅಲ್ಲದೇ ಹಲವಾರು ಯಾತ್ರಾರ್ಥಿಗಳು ಕಾಣೆಯಾಗಿದ್ದಾರೆ. ಕಳೆದ ವರ್ಷ 240 ಯಾತ್ರಾರ್ಥಿಗಳು ಹಜ್ ಯಾತ್ರೆ ವೇಳೆ ಸಾವನ್ನಪ್ಪಿದ್ದರು.
ಬೆಂಗಳೂರಿನ ಇಬ್ಬರು ಯಾತ್ರಿಕರು ಸಾವು
ಹಜ್ ಯಾತ್ರೆ ವೇಳೆ ಬೆಂಗಳೂರಿನ ಅಬ್ದುಲ್ಲಾ ಹಾಗೂ ಕೌಸರ್ ಎಂಬುವರು ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಬೆಂಗಳೂರಿಗೆ ತರಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಆ ದೇಶದ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.- ರಹೀಂ ಖಾನ್, ಹಜ್ ಸಚಿವ