ಜಪಾನ್‌ನಲ್ಲಿ 2024ರ ಮೊದಲಾರ್ಧದ ಕೇವಲ 6 ತಿಂಗಳಲ್ಲಿ 40000 ಒಬ್ಬಂಟಿ ವೃದ್ಧರ ಸಾವು!

| Published : Sep 02 2024, 02:14 AM IST / Updated: Sep 02 2024, 04:26 AM IST

ಸಾರಾಂಶ

ವಿಶ್ವದಲ್ಲಿಯೇ ಅತಿ ಹೆಚ್ಚು ವೃದ್ಧರನ್ನು ಹೊಂದಿರುವ ಜಪಾನ್‌ ದೇಶದಲ್ಲಿ 2024ರ ಮೊದಲಾರ್ಧದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ 37,227 ವೃದ್ಧರು ಮೃತಪಟ್ಟಿದ್ದಾರೆ.

ಟೋಕಿಯೋ: ವಿಶ್ವದಲ್ಲಿಯೇ ಅತಿ ಹೆಚ್ಚು ವೃದ್ಧರನ್ನು ಹೊಂದಿರುವ ಜಪಾನ್‌ ದೇಶದಲ್ಲಿ 2024ರ ಮೊದಲಾರ್ಧದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ 37,227 ವೃದ್ಧರು ಮೃತಪಟ್ಟಿದ್ದಾರೆ. ಈ ಪೈಕಿ ಶೇ.70ರಷ್ಟು ಮಂದಿ 65 ವರ್ಷದ ಮೇಲ್ಪಟ್ಟವರಾಗಿದ್ದಾರೆ ಎಂದು ಜಪಾನ್‌ ಪೊಲೀಸ್‌ ಏಜೆನ್ಸಿ ನಡೆಸಿದ ವರದಿ ಹೇಳಿದೆ.

ನ್ಯಾಷನಲ್‌ ಪೊಲೀಸ್‌ ಏಜೆನ್ಸಿ ಪ್ರಕಾರ ಮೃತರ ಪೈಕಿ ಶೇ.40ರಷ್ಟು ಜನರ ದೇಹ ಸತ್ತ ಒಂದು ದಿನದಲ್ಲಿಯೇ ಸಿಕ್ಕಿವೆ. 3,939 ಮಂದಿಯ ಸಾವಿನ ಸುದ್ದಿಯು ತಿಂಗಳ ಬಳಿಕ ಮನೆಯವರಿಗೆ ಲಭಿಸಿದೆ. 130 ಮೃತ ದೇಹಗಳ ಮಾಹಿತಿಯು ಕಾಣೆಯಾಗಿ ಒಂದು ವರ್ಷದ ಬಳಿಕ ಲಭಿಸಿದೆ. ಒಟ್ಟು ಮೃತರ ಪೈಕಿ 85 ವರ್ಷ ಮೇಲ್ಪಟ್ಟವರ 7,498, 75-79 ವರ್ಷದ 5920 ಮತ್ತು 70-74 ವರ್ಷದವ 5,635 ಶವಗಳು ಸಿಕ್ಕಿವೆ ಎಂದು ಅದು ಹೇಳಿದೆ.

2050ರ ವೇಳೆಗೆ 1.8 ಕೋಟಿ ಒಬ್ಬಂಟಿ ಹಿರಿಯರು:

ಜಪಾನ್‌ನ ರಾಷ್ಟ್ರೀಯ ಜನಸಂಖ್ಯಾ ಮತ್ತು ಸಾಮಾಜಿಕ ಭದ್ರತೆ ಸಂಶೋಧನಾ ಸಂಸ್ಥೆ ಪ್ರಕಾರ 2050ರ ವೇಳೆಗೆ ಒಬ್ಬಂಟಿಯಾಗಿ ಬದುಕುತ್ತಿರುವ ವೃದ್ಧರ ಸಂಖ್ಯೆಯು 1.8 ಕೋಟಿಗೆ ಏರಿಕೆಯಾಗಲಿದೆ. ಅದೇ ವರ್ಷ ಒಬ್ಬಂಟಿಯಾಗಿ ಬದುಕುತ್ತಿರುವವ ಸಾಮಾನ್ಯ ಜನಸಂಖ್ಯೆಯು 2.33 ಕೋಟಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಮನೆಯಲ್ಲಿನ ಕಿರಿಯ ಸದಸ್ಯರು ಉದ್ಯೋಗ ಅರಸಿ ನಗರಗಳಿಗೆ ಬರುವುದರಿಂದ ಹಿರಿಯರು ಮನೆಯಲ್ಲಿಯೇ ಉಳಿದುಕೊಳ್ಳುತ್ತಾರೆ. ಕಿರಿಯರಿಗೆ ಕೆಲಸ ಸಿಕ್ಕ ಬಳಿಕ ಪಟ್ಟಣದಲ್ಲಿಯೇ ಉಳಿದುಕೊಳ್ಳುವ ಕಾರಣ ಹಿರಿಯರ ಕಡೆಗೆ ಗಮನ ಇರುವುದಿಲ್ಲ ಎಂದು ವರದಿ ಹೇಳಿದೆ.