ಸಾರಾಂಶ
ಇಸ್ಲಾಮಾಬಾದ್ : ವಿವಿಧ ಕ್ರಿಮಿನಲ್ ಕೇಸುಗಳಲ್ಲಿ ಸಿಲುಕಿ 2 ವರ್ಷದಿಂದ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರಿಗೀಗ ಇನ್ನೊಂದು ಸಂಕಷ್ಟ ಎದುರಾಗಿದೆ. ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷವನ್ನು ದೇಶದ್ರೋಹದ ಚಟುವಟಿಕೆಗಳ ಆಧಾರದ ಮೇಲೆ ನಿಷೇಧಿಸುವುದಾಗಿ ಪಾಕಿಸ್ತಾನದ ಸರ್ಕಾರ ಪ್ರಕಟಿಸಿದೆ. ಅಲ್ಲದೆ ಇಮ್ರಾನ್ ಮತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ಆರಿಫ್ ಅಲ್ವಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವುದಾಗಿಯೂ ತಿಳಿಸಿದೆ.
ಕೆಲ ದಿನಗಳ ಹಿಂದಷ್ಟೇ ಇಮ್ರಾನ್ ಮತ್ತು ಬುಶ್ರಾ ಬೀಬಿ ಅಕ್ರಮ ಮದುವೆ ಪ್ರಕರಣ ಕೋರ್ಟ್‌ನಲ್ಲಿ ಖುಲಾಸೆಗೊಂಡಿತ್ತು. ಇದೇ ವೇಳೆ, ದೇಶದ ಸುಪ್ರೀಂಕೋರ್ಟ್ ಇಮ್ರಾನ್ ಖಾನ್‌ರ ಪಿಟಿಐ ಪಕ್ಷಕ್ಕೆ ಸಂಸತ್ತಿನಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಹೊಂದುವ ಅಧಿಕಾರವಿದೆ ಎಂದು ತೀರ್ಪು ನೀಡಿತ್ತು. ಈ ಎರಡು ಸಿಹಿ ಸುದ್ದಿಗಳ ಬೆನ್ನಲ್ಲೇ ಇದೀಗ ಅವರ ಪಕ್ಷವನ್ನೇ ನಿಷೇಧಿಸುವ ನಿರ್ಧಾರವನ್ನು ಪಾಕ್ ಸರ್ಕಾರ ಪ್ರಕಟಿಸಿದೆ.
‘ವಿದೇಶಿ ಹಣ ಸ್ವೀಕಾರ ಪ್ರಕರಣ, ಮೇ 9ರ ಗಲಭೆ, ಅಮೆರಿಕದಲ್ಲಿ ಅಂಗೀಕರಿಸಿದ ನಿರ್ಣಯದ ರಹಸ್ಯ ಬಯಲು- ಮುಂತಾದವುಗಳ ಆಧಾರದ ಮೇಲೆ ಪಿಟಿಐ ಪಕ್ಷ ದೇಶದ್ರೋಹದ ಚಟುವಟಿಕೆಗಳಲ್ಲಿ ತೊಡಗಿದೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ಸಿಕ್ಕಂತಾಗಿದೆ. ಹೀಗಾಗಿ ಪಿಟಿಐ ಪಕ್ಷವನ್ನು ನಿಷೇಧಿಸಿ, ಅದರ ನಾಯಕರ ವಿರುದ್ಧ ಕ್ರಿಮಿನಲ್ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗುವುದು’ ಎಂದು ಸರ್ಕಾರ ಹೇಳಿದೆ.
ಅಕ್ರಮ ವಿವಾಹ ಹಾಗೂ ತೋಶಾಖಾನಾ ಹಗರಣದ 2 ಕೇಸಿನಲ್ಲಿ ದೋಷಮುಕ್ತರಾದರೂ, ತೋಶಾಖಾನಾದ 3ನೇ ಕೇಸಲ್ಲಿ 71 ವರ್ಷದ ಇಮ್ರಾನ್ ಖಾನ್ ಸದ್ಯ ರಾವಲ್ಪಿಂಡಿ ಜೈಲಿನಲ್ಲಿದ್ದಾರೆ. 2022ರಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬಳಿಕ ಅವರು ಹಾಗೂ ಅವರ ಪಕ್ಷದ ನೂರಾರು ನಾಯಕರನ್ನು ನವಾಜ್ ಷರೀಫ್ ನೇತೃತ್ವದ ಪಿಎಂಎಲ್‌ಎನ್ ಸರ್ಕಾರ ಜೈಲಿಗೆ ತಳ್ಳಿದೆ.