ಪಠಾಣ್‌ಕೋಟ್‌ ದಾಳಿಯ ರೂವಾರಿ ನಿಗೂಢ ಹತ್ಯೆ

| Published : Oct 12 2023, 01:30 AM IST / Updated: Oct 12 2023, 10:22 AM IST

pathankot attack
ಪಠಾಣ್‌ಕೋಟ್‌ ದಾಳಿಯ ರೂವಾರಿ ನಿಗೂಢ ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕ್‌ನ ಸಿಯಾಲ್‌ಕೋಟ್‌ ಜಿಲ್ಲೆಯ ದಸ್ಕಾ ಪಟ್ಟಣದಲ್ಲಿರುವ ಮಸೀದಿಯಿಂದ ಹೊರಬರುವ ವೇಳೆ ಅಪರಿಚಿತ ಬಂದೂಕುಧಾರಿಗಳು ಶಾಹಿದ್‌ನನ್ನು ಹತ್ಯೆಗೈದಿದ್ದಾರೆ.

ಪಾಕ್‌ ಮಸೀದಿಯಲ್ಲಿ ಗುಂಡಿನ ದಾಳಿಗೆ ಲತೀಫ್‌ ಬಲಿ ಪಿಟಿಐ ನವದೆಹಲಿ 2016ರಲ್ಲಿ ಪಂಜಾಬ್‌ನ ಪಠಾಣ್‌ಕೋಟ್‌ ವಾಯುನೆಲೆಯ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯ ರೂವಾರಿ ಹಾಗೂ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಯಲ್ಲಿದ್ದ ಶಾಹಿದ್‌ ಲತೀಫ್‌ (53) ಪಾಕಿಸ್ತಾನದಲ್ಲಿ ನಡೆದ ನಿಗೂಢ ಗುಂಡಿನ ದಾಳಿಯಲ್ಲಿ ಹತ್ಯೆಯಾಗಿದ್ದಾನೆ. 

ಪಾಕ್‌ನ ಸಿಯಾಲ್‌ಕೋಟ್‌ ಜಿಲ್ಲೆಯ ದಸ್ಕಾ ಪಟ್ಟಣದಲ್ಲಿರುವ ಮಸೀದಿಯಿಂದ ಹೊರಬರುವ ವೇಳೆ ಅಪರಿಚಿತ ಬಂದೂಕುಧಾರಿಗಳು ಶಾಹಿದ್‌ನನ್ನು ಹತ್ಯೆಗೈದಿದ್ದಾರೆ. ಭಾರತದ ಮೋಸ್ಟ್‌ ವಾಂಟೆಡ್‌ ಪಟ್ಟಿಯಲ್ಲಿದ್ದ ಉಗ್ರರು, ಗ್ಯಾಂಗ್‌ಸ್ಟರ್‌ಗಳ ಪೈಕಿ ಕಳೆದ ಒಂದೂವರೆ ವರ್ಷದಲ್ಲಿ 17 ಜನರು ಕೆನಡಾ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಬೆನ್ನಲ್ಲೇ, ಇದೀಗ ಮತ್ತೊಬ್ಬ ಉಗ್ರನ ನಿಗೂಢ ಸಾವು ಸಂಭವಿಸಿದೆ. ಲತೀಫ್‌ ಅಲಿಯಾಸ್‌ ಬಿಲಾಲ್‌ ಹಾಗೂ ಆತನ ಜೊತೆಗಿದ್ದ ಇನ್ನೂ ಇಬ್ಬರನ್ನು ಬುಧವಾರ ಮೂವರು ಬಂದೂಕುಧಾರಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ. ಲತೀಫ್‌ನ ಜೊತೆ ಆತನ ದೊಡ್ಡ ಸಶಸ್ತ್ರ ಬೆಂಗಾವಲು ಪಡೆ ಇತ್ತಾದರೂ, ಅನಾಮಿಕರ ಗುಂಡಿನ ದಾಳಿಗೆ ಆತ ಮತ್ತು ಇತರೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಘಟನೆಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಈತ 1993ರಲ್ಲಿ ಕಾಶ್ಮೀರಕ್ಕೆ ನುಸುಳಿ, ಮರುವರ್ಷ ಬಂಧನಕ್ಕೊಳಗಾಗಿದ್ದ. ಜೈಷ್‌ ಎ ಮೊಹಮ್ಮದ್‌ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಮಸೂದ್‌ ಅಜರ್‌ ಜೊತೆ 2010ರವರೆಗೆ ಜಮ್ಮುವಿನ ಜೈಲಿನಲ್ಲಿದ್ದ. ನಂತರ ಅವನನ್ನು ಪಾಕ್‌ಗೆ ಗಡೀಪಾರು ಮಾಡಲಾಗಿತ್ತು. ಅಲ್ಲಿ ಜೈಷ್‌ ಎ ಮೊಹಮ್ಮದ್‌ ಸಂಘಟನೆ ಸೇರಿ ಪಠಾಣ್‌ಕೋಟ್‌ನ ವಾಯುನೆಲೆ ಮೇಲೆ ದಾಳಿ ಸಂಘಟಿಸಿ, ವಾಯುಪಡೆಯ ಏಳು ಯೋಧರನ್ನು ಹತ್ಯೆಗೈದಿದ್ದ. ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆತನನ್ನು ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಗೆ ಸೇರಿಸಿತ್ತು. ಈಗ ಆತನ ಹತ್ಯೆಯೊಂದಿಗೆ ಜೈಷ್‌ ಎ ಮೊಹಮ್ಮದ್‌ ಸಂಘಟನೆಗೆ ಭಾರೀ ಆಘಾತ ನೀಡಿದಂತಾಗಿದೆ. ಪಠಾಣ್‌ಕೋಟ್‌ ಮೇಲೆ ದಾಳಿ ನಡೆಸಿದ್ದ ಉಗ್ರರು ಮೂರು ದಿನಗಳ ಕಾಲ ಅಲ್ಲಿ ಅಡಗಿ ಭಾರತೀಯ ಭದ್ರತಾ ಪಡೆಗಳಿಗೆ ಸವಾಲೆಸೆದಿದ್ದರು. 

ಯಾರೀತ ಶಾಹಿದ್‌ ಲತೀಫ್‌? ಪಾಕ್‌ನಿಂದ ಕಾಶ್ಮೀರಕ್ಕೆ ಒಳನುಸುಳಿ 1994ರಲ್ಲಿ ಸೆರೆಸಿಕ್ಕ ಭಯೋತ್ಪಾದಕ ಶಾಹಿದ್‌ ಲತೀಫ್‌. ಜೈಲಿನಲ್ಲಿ ಮಸೂದ್‌ ಅಜರ್‌ ಜೊತೆ ಸಂಪರ್ಕಕ್ಕೆ ಬಂದು ಜೈಷ್‌ ಎ ಮೊಹಮ್ಮದ್‌ ಸಂಘಟನೆ ಸೇರಿದ್ದ. 1999ರಲ್ಲಿ ಇಂಡಿಯನ್‌ ಏರ್‌ಲೈನ್ಸ್ ವಿಮಾನವನ್ನು ಜೈಷ್‌ ಉಗ್ರರು ಹೈಜಾಕ್‌ ಮಾಡಿದ್ದಾಗ ಈತನನ್ನು ಬಿಡುಗಡೆ ಮಾಡಬೇಕೆಂದು ಕೇಳಿದ್ದರು. ನಂತರ ಪಾಕ್‌ ಜೊತೆ ಸಂಬಂಧ ಸುಧಾರಿಸಿಕೊಳ್ಳಲು 2010ರಲ್ಲಿ ಯುಪಿಎ ಸರ್ಕಾರ ಬಿಡುಗಡೆ ಮಾಡಿ ಪಾಕ್‌ಗೆ ಕಳುಹಿಸಿದ್ದ ಉಗ್ರರಲ್ಲಿ ಇವನೂ ಸೇರಿದ್ದ. ಈತನನ್ನು ಯುಎಪಿಎ ಕಾಯ್ದೆಯಡಿ ಭಯೋತ್ಪಾದಕನೆಂದು ಭಾರತ ಘೋಷಿಸಿತ್ತು.