ರಷ್ಯಾ-ಉಕ್ರೇನ್‌ ಯುದ್ಧ - ಶಾಂತಿ ಮಾತುಕತೆ ನಡೆಸಿ, ಯುದ್ಧ ನಿಲ್ಲಿಸಿ: ಭಾರತದ ಪ್ರಧಾನಿ ನರೇಂದ್ರ ಮೋದಿ

| Published : Aug 24 2024, 02:02 AM IST / Updated: Aug 24 2024, 04:49 AM IST

ಸಾರಾಂಶ

ರಷ್ಯಾ-ಉಕ್ರೇನ್‌ ಯುದ್ಧದ ಆರಂಭದಿಂದ ಶಾಂತಿ ಸಂದೇಶ ಸಾರುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ತಮ್ಮ ಮೊತ್ತಮೊದಲ ಉಕ್ರೇನ್‌ ಭೇಟಿಯ ವೇಳೆಯೂ ಇದೇ ಮಾತು ಪುನರುಚ್ಚರಿಸಿದ್ದಾರೆ.

ಕೀವ್‌ (ಉಕ್ರೇನ್‌): ರಷ್ಯಾ-ಉಕ್ರೇನ್‌ ಯುದ್ಧದ ಆರಂಭದಿಂದ ಶಾಂತಿ ಸಂದೇಶ ಸಾರುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ತಮ್ಮ ಮೊತ್ತಮೊದಲ ಉಕ್ರೇನ್‌ ಭೇಟಿಯ ವೇಳೆಯೂ ಇದೇ ಮಾತು ಪುನರುಚ್ಚರಿಸಿದ್ದಾರೆ. 

‘ಶಾಂತಿ ಮಾತುಕತೆ ನಡೆಸಿ, ಯುದ್ಧ ನಿಲ್ಲಿಸಿ’ ಎಂದು ಅವರು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಝೆಲೆನ್ಸ್ಕಿಅವರಿಗೆ ಕರೆ ನೀಡಿದ್ದಾರೆ. ಅಲ್ಲದೆ, ತಮ್ಮ ರಷ್ಯಾ ಭೇಟಿ ವೇಳೆ ಅಲ್ಲಿನ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೂ ಇದೇ ಮಾತು ಹೇಳಿದ್ದಾಗಿ ತಿಳಿಸಿದ್ದಾರೆ.ಶುಕ್ರವಾರ ಬೆಳಗ್ಗೆ 1 ದಿನದ ಭೇಟಿಗೆ ಉಕ್ರೇನ್‌ಗೆ ಆಗಮಿಸಿದ ಪ್ರಧಾನಿ ಮೋದಿ, (ಇದು 1991ರಲ್ಲಿ ಉಕ್ರೇನ್‌ ಸ್ವಾತಂತ್ರ್ಯ ಪಡೆದ ನಂತರ ಭಾರತದ ಪ್ರಧಾನಿಯ ಮೊತ್ತಮೊದಲ ಭೇಟಿ), ಅಧ್ಯಕ್ಷ ಝೆಲೆನ್ಸ್ಕಿಜತೆ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ ಹಿಂದಿಯಲ್ಲೇ ಮಾತನಾಡಿದ ಅವರು, ‘ಯುದ್ಧ ಬೇಡ, ಶಾಂತಿ ಮಾರ್ಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಇದಕ್ಕಾಗಿ ನಾನು ಎಲ್ಲ ನೆರವು ನೀಡಲು ಸಿದ್ಧ’ ಎಂದು ಕಳಕಳಿಯ ಮನವಿ ಮಾಡಿದರು.

ಶಾಂತಿ ಸ್ಥಾಪನೆಗೆ 2 ಮಾರ್ಗ:‘ಭಾರತವು ಯುದ್ಧಕ್ಕೆ ಸಂಬಂಧಿಸದಂತೆ 2 ಮಾರ್ಗಗಳನ್ನು ಅನುಸರಿಸುತ್ತಿದೆ. ಮೊದಲನೆಯದು ಮಾನವೀಯ ದೃಷ್ಟಿಕೋನದ ಮಾರ್ಗ ಹಾಗೂ 2ನೆಯದು ಯುದ್ಧದಿಂದ ದೂರ ಇದ್ದು ಶಾಂತಿ ಮಾತುಕತೆ ನಡೆಸುವ ಮಾರ್ಗ’ ಎಂದರು.‘1ನೇ ಮಾರ್ಗವಾದ ಮಾನವೀಯ ದೃಷ್ಟಿಕೋನದ ಮಾರ್ಗದಂತೆ ಭಾರತವು ಅನೇಕ ನೆರವನ್ನು (ಉಕ್ರೇನ್‌ಗೆ) ನೀಡಿದೆ. ಯುದ್ಧದ ವೇಳೆ ಇರುವ ಮಾನವೀಯ ಅಗತ್ಯಗಳನ್ನು ಭಾರತ ಪೂರೈಸಿದೆ. ಮುಂದೆಯೂ ಪೂರೈಸುತ್ತೇವೆ. ಇತರರಿಗಿಂತ ನಾವು ಈ ವಿಷಯದಲ್ಲಿ 2 ಹೆಜ್ಜೆ ಮುಂದೆ ಇದ್ದೇವೆ. ಧ್ವೇಷಮಯ ಪರಿಸ್ಥಿತಿಯಲ್ಲೂ ನಮ್ಮ ಸಂಬಂಧ ಮುಂದುವರಿದಿದೆ. ಇದು ಸ್ವಾಗತಾರ್ಹ’ ಎಂದರು.‘

ಇನ್ನು 2ನೇ ಮಾರ್ಗವೆಂದರೆ ಯುದ್ಧದಿಂದ ದೂರ ಇರುವುದು. ಇದು ನಮ್ಮ ನಿಲುವು. ಆದರೆ ಹಾಗಂತ ನಾವು ತಟಸ್ಥವಾಗಿಲ್ಲ. ನಾವು ಮೊದಲ ದಿನದಿಂದಲೇ ಒಂದು ಪಕ್ಷ ವಹಿಸಿದ್ದೆವು. ಅದು ಶಾಂತಿಯ ಪಕ್ಷ. ನಾವು ಬುದ್ಧ ಹಾಗೂ ಗಾಂಧೀಜಿ ನಾಡಿನವರು. ಶಾಂತಿ ಸಂದೇಶ ನೀಡುವವರು. 140 ಕೋಟಿ ಭಾರತೀಯರ ಭಾವನೆ ಮಾನವೀಯತೆಯಿಂದ ಪ್ರೇರಿತವಾಗಿದೆ.

 ಜನಪ್ರಣೀತವಾದ ಶಾಂತಿಯ ಸಂದೇಶ ಹೊತ್ತು ನಾನು ಇಲ್ಲಿಗೆ ಬಂದಿದ್ದೇನೆ. ಜಿ-7 ದೇಶಗಳ ಪರವಾಗಿಯೂ ನಾನು ಶಾಂತಿ ಸಂದೇಶ ಹೊತ್ತು ಬಂದಿದ್ದೇನೆ’ ಎಂದು ಹೇಳಿದರು.‘ಇತ್ತೀಚೆಗೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ರನ್ನು ಭೇಟಿ ಮಾಡಿದಾಗ ‘ಇದು ಯುದ್ಧದ ಸಮಯವಲ್ಲ. ಯಾವುದೇ ಸಮಸ್ಯೆಯ ಇತ್ಯರ್ಥ ರಣಭೂಮಿಯಲ್ಲಿ ಆಗದು. ರಾಜತಾಂತ್ರಿಕ, ಶಾಂತಿ ಮಾರ್ಗದ ಮೂಲಕ ಆಗುತ್ತದೆ’ ಎಂದು ಹೇಳಿದ್ದೆ. ಹೀಗಾಗಿ ನೀವು ಎರಡೂ ಪಕ್ಷದವರು ಕೂಡಿ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು. ಕ್ಷೇತ್ರೀಯ ಅಂಖಡತೆಯನ್ನು ನಾವು ರಕ್ಷಿಸಬೇಕಿದೆ’ ಎಂದು ಕರೆ ನೀಡಿದರು.

‘ಅಲ್ಲದೆ, ಶಾಂತಿ ಸ್ಥಾಪನೆಗೆ ನಡೆಯುವ ಯತ್ನಗಳಲ್ಲಿ ನಾನು ಯಾವುದೇ ಪಾತ್ರ ವಹಿಸಲು ಸಿದ್ಧ. ಸ್ನೇಹಿತನಾಗಿ ನಾನು ಭರವಸೆ ನೀಡುತ್ತೇನೆ. ನಾಳೆ ನಿಮ್ಮ (ಉಕ್ರೇನ್‌ನ) ರಾಷ್ಟ್ರೀಯ ದಿನ. ಶಾಂತಿ ಸ್ಥಾಪನೆ ಆಗಲಿ ಎಂದು ಆಶಿಸುತ್ತೇನೆ’ ಎಂದರು.ಯುದ್ಧದಲ್ಲಿ ಮಡಿದ ಉಕ್ರೇನಿ ಮಕ್ಕಳ ಕುರಿತ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದ ಮೋದಿ, ‘ಉಕ್ರೇನ್‌ ಮಕ್ಕಳು ಮೃತಪಟ್ಟಿದ್ದು ನನ್ನನ್ನು ಮರುಗುವಂತೆ ಮಾಡಿದೆ’ ಎಂದು ಬೇಸರಿಸಿದರು.

ಭಾರತದ ಪರವಾಗಿ ಕೃತಜ್ಞತೆ:

ಇದೇ ವೇಳೆ, ರಷ್ಯಾ-ಉಕ್ರೇನ್‌ ಯುದ್ಧದ ಆರಂಭದ ದಿನಗಳನ್ನು ನೆನಪಿಸಿಕೊಂಡ ಮೋದಿ, ‘ಯುದ್ಧಾರಂಭದ ದಿನಗಳಲ್ಲಿ ಭಾರತದ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ನೀವು ರಕ್ಷಿಸಿ ಭಾರತಕ್ಕೆ ಸುರಕ್ಷಿತವಾಗಿ ಕಳಿಸಿದಿರಿ. ಇದಕ್ಕಾಗಿ ನಾನು 140 ಕೋಟಿ ಭಾರತೀಯರ ಪರವಾಗಿ ಹಾಗೂ ಮಕ್ಕಳ ಕುಟುಂಬದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದರು.