ಸಾರಾಂಶ
ಟೋಕಿಯೋ: ಸಸ್ಯಗಳಿಗೂ ಜೀವವಿದೆ. ತಮ್ಮ ಸುತ್ತಮುತ್ತಲಿನ ಪರಿಸರದ ಆಗುಹೋಗುಗಳ ಬಗ್ಗೆ ಅವುಗಳಿಗೆ ಅರಿವಿದೆ ಎಂಬುದನ್ನು ಭಾರತೀಯ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ 1901ರಲ್ಲೇ ಖಚಿತಪಡಿಸಿದ್ದರು.
ಆದರೆ ಹೀಗೆ ಜೀವ ಹೊಂದಿರುವ ಸಸ್ಯದ ಎಲೆಗಳು ಪರಸ್ಪರ ಮಾತನಾಡುವ ದೃಶ್ಯವನ್ನು ಜಪಾನ್ ವಿಜ್ಞಾನಿಗಳ ತಂಡವೊಂದು ಮೊತ್ತಮೊದಲ ಬಾರಿಗೆ ಸೆರೆ ಹಿಡಿದಿದೆ.
ಅಪಾಯ ಅಥವಾ ಹವಾಮಾನ ಬದಲಾವಣೆಯ ಸಮಯದಲ್ಲಿ ಸಸ್ಯಗಳು ಸಹ ಪರಸ್ಪರ ಮಾತನಾಡುತ್ತವೆ ಎಂಬ ಅಚ್ಚರಿಯ ಸಂಗತಿಯನ್ನು ಜಪಾನಿನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಸಸ್ಯಗಳ ಈ ಸಂವಹನವನ್ನು ನೈಜ ಸಮಯದಲ್ಲಿ ಚಿತ್ರೀಕರಿಸಿದ್ದಾರೆ.
ಜಪಾನಿನ ಸೈತಾಮ ವಿವಿಯ ಜೀವವಿಜ್ಞಾನಿ ಮಸಾತ್ಸುಗು ಗೊಯೋಟಾ, ಸಂಶೋಧಕ ಟಕುಯಾ ಉಯಮುರಾ ಮತ್ತು ಅವರ ಪಿಎಚ್‌ಡಿ ವಿದ್ಯಾರ್ಥಿ ಯೂರಿ ಅರಾತನಿ ಈ ಸಂಶೋಧನೆಯನ್ನು ನಡೆಸಿದ್ದು, ಇದನ್ನು ಜಪಾನಿನ ನೇಚರ್ ಕಮ್ಯುನಿಕೇಶನ್ ಪ್ರಕಟಿಸಿದೆ.
ಈ ಸಂಶೋಧಕರ ಪ್ರಕಾರ ಸಸ್ಯಗಳು ಸಹ ಅಪಾಯ ಎದುರಾದ ಸಮಯದಲ್ಲಿ ಪರಸ್ಪರ ಸಂವಹನ ನಡೆಸುತ್ತವೆ.
ಗಾಳಿಯ ಮೂಲಕ ಪಕ್ಕದಲ್ಲಿರುವ ಸಸ್ಯಕ್ಕೆ ಎಚ್ಚರಿಕೆಯನ್ನು ರವಾನಿಸುತ್ತವೆ. ದಾಳಿಗೊಳಗಾದ ಸಸ್ಯಗಳು ಆವಿಯಾಗಬಲ್ಲ ಸಾವಯವ ಸಂಯುಕ್ತ ಹೊರಸೂಸುತ್ತವೆ. ಈ ಎಚ್ಚರಿಕೆಯನ್ನು ಮತ್ತೊಂದು ಸಸ್ಯ ಗ್ರಹಿಸುತ್ತದೆ ಎಂದು ವರದಿ ಹೇಳಿದೆ.
ಇದಕ್ಕಾಗಿ ಸಂಶೋಧಕರ ತಂಡ ಟೊಮೊಟೊ ಸಸ್ಯದ ಎಲೆಗಳನ್ನು ಬಳಸಿಕೊಂಡು ಪ್ರಯೋಗ ನಡೆಸಿದ್ದು, ಒಂದು ಎಲೆಯ ಮೇಲೆ ಕಂಬಳಿಹುಳವನ್ನು ಬಿಟ್ಟಾಗ ಅದು ಕ್ಯಾಲ್ಸಿಯಂ ಕಣಗಳನ್ನು ಬಿಡುಗಡೆ ಮಾಡಿದ್ದಲ್ಲದೇ ತನ್ನ ಬಣ್ಣವನ್ನು ಮತ್ತಷ್ಟು ಗಾಢವಾಗಿಸಿಕೊಂಡಿದೆ.
ಈ ವೇಳೆ ಸುರಕ್ಷಿತವಾಗಿರುವ ಎಲೆ ಈ ಸಂದೇಶವನ್ನು ಸ್ವೀಕರಿಸಿರುವುದನ್ನು ಅವರು ವಿಡಿಯೋದಲ್ಲಿ ದಾಖಲಿಸಿದ್ದಾರೆ. ಅಲ್ಲದೇ ಕಳೆ ಗಿಡಗಳನ್ನು ನಿರ್ದಿಷ್ಟ ಸಸ್ಯಗಳಿರುವ ಭಾಗದಲ್ಲಿ ಹರಡಿದಾಗ, ದೂರದಲ್ಲಿರುವ ಸಸ್ಯಗಳಿಗೆ ಸಹ ಸಂದೇಶ ರವಾನೆಯಾಗಿರುವುದನ್ನು ಪತ್ತೆ ಹಚ್ಚಲಾಗಿದೆ.