ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಿಂದ ನಾಲ್ಕು ದಿನಗಳ ರಷ್ಯಾ ಹಾಗೂ ಆಸ್ಟ್ರಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಿಂದ ನಾಲ್ಕು ದಿನಗಳ ರಷ್ಯಾ ಹಾಗೂ ಆಸ್ಟ್ರಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ಸಮರ ಆರಂಭಿಸಿದ ಬಳಿಕ ಪ್ರಧಾನಿ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಆಹ್ವಾನದ ಮೇಲೆ ತೆರಳುತ್ತಿರುವ ಅವರು ಸೋಮವಾರ, ಮಂಗಳವಾರ ರಷ್ಯಾದಲ್ಲಿ ಹಲವು ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬುಧವಾರ ಆಸ್ಟ್ರಿಯಾಕ್ಕೆ ತೆರಳಲಿರುವ ಪ್ರಧಾನಿ, ಗುರುವಾರದವರೆಗೂ ಅಲ್ಲಿರಲಿದ್ದಾರೆ. 46 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ರಷ್ಯಾ- ಭಾರತ ಮಾತುಕತೆ:

ರಷ್ಯಾ ಪ್ರವಾಸದ ಸಂದರ್ಭದಲ್ಲಿ ಪುಟಿನ್‌ ಅವರ ಜತೆಗೂಡಿ ಭಾರತ ಹಾಗೂ ರಷ್ಯಾ ವಾರ್ಷಿಕ ಶೃಂಗ ಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ. ಉಭಯ ದೇಶಗಳ ಬಾಂಧವ್ಯದ ಕುರಿತು ವಿಸ್ತೃತ ಸಮಾಲೋಚನೆ ನಡೆಸಲಿರುವ ಅವರು, ಸಮಕಾಲೀನ ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಕುರಿತು ಅತ್ಯುನ್ನತ ಮಟ್ಟದ ಚರ್ಚೆಯನ್ನು ನಡೆಸಲಿದ್ದಾರೆ. ಮೋದಿ ಅವರ ಭೇಟಿ ಅತ್ಯಂತ ಮಹತ್ವದ್ದು ಹಾಗೂ ಸುಸಜ್ಜಿತವಾಗಿರಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ತಿಳಿಸಿದ್ದಾರೆ.

2019ರಲ್ಲಿ ಪ್ರಧಾನಿ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದರು. ಆಗ ಪೂರ್ವ ರಷ್ಯಾದಲ್ಲಿರುವ ವ್ಲಾದಿವೋಸ್ಟೊಕ್‌ನಲ್ಲಿ ಆರ್ಥಿಕ ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದರು.