ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಭಾನುವಾರದಿಂದ 4 ದಿನಗಳ ಕಾಲ ಕೆನಡಾ, ಸೈಪ್ರಸ್ ಮತ್ತು ಕ್ರೊವೇಷಿಯಾ ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರದಿಂದ 4 ದಿನಗಳ ಕಾಲ ಕೆನಡಾ, ಸೈಪ್ರಸ್ ಮತ್ತು ಕ್ರೊವೇಷಿಯಾ ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಕೆನಡಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂದೂರದ ಬಳಿಕ ಇದು ಮೋದಿ ಅವರ ಮೊದಲ ವಿದೇಶ ಪ್ರವಾಸವಾಗಿದೆ.
ಜೂ.15 ರಂದು ಸೈಪ್ರಸ್ ಗೆ ಭೇಟಿ ನೀಡಲಿರುವ ಪ್ರಧಾನಿ, ಬಳಿಕ ಕೆನಡಾ, ನಂತರ ಕ್ರೊವೇಷಿಯಾಕ್ಕೆ ತೆರಳಲಿದ್ದಾರೆ. ಕೆನಡಾದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟಿನ ಬಳಿಕ ಇದೇ ಮೊದಲು ಕೆನಡಾಗೆ ತೆರಳಿಲಿರುವ ಮೋದಿ ಅಲ್ಲಿ 16,17 ರಂದು ನಡೆಯಲಿರುವ ಜಿ7 ಶೃಂಗಸಭೆಗೆ ಪ್ರಧಾನಿ ಮಾರ್ಕ್ ಕಾರ್ನಿ ಆಹ್ವಾನದ ಮೇರೆಗೆ ಭಾಗಿಯಾಗಲಿದ್ದಾರೆ.
ಕ್ರೋವೇಷಿಯಾಕ್ಕೆ ಇದು ಭಾರತ ಪ್ರಧಾನಿಯೊಬ್ಬರ ಮೊದಲ ಭೇಟಿಯಾಗಿದ್ದರೆ, ಸೈಪ್ರಸ್‌ಗೆ ಎರಡು ದಶಕದ ಬಳಿಕ ಭಾರತದ ಪ್ರಧಾನಿಯೊಬ್ಬರ ಭೇಟಿ ಇದಾಗಿರಲಿದೆ.
ಅಯೋಧ್ಯೆ ರಾಮದರ್ಬಾರ್ ನಿನ್ನೆಯಿಂದ ಸಾರ್ವಜನಿಕ ದರ್ಶನಕ್ಕೆ ಸೀಮಿತ ಮುಕ್ತ
ಅಯೋಧ್ಯೆ: ಇತ್ತೀಚೆಗೆ ಇಲ್ಲಿನ ರಾಮಮಂದಿರದ ಮೊದಲ ಮಹಡಿಯಲ್ಲಿ ಪ್ರತಿಷ್ಠಾಪಿಸಲಾದ ರಾಮ ದರ್ಬಾರ್ ಅನ್ನು ಶನಿವಾರ ಭಕ್ತರಿಗೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಮಾಹಿತಿ ನೀಡಿದ್ದು, ‘ಸಂಜೆ 5ರಿಂದ 7ರವರೆಗೆ ಮತ್ತು ಸಂಜೆ 7ರಿಂದ ರಾತ್ರಿ 9ರವರೆಗೆ 2 ಅವಧಿಗಳಿಗೆ ಸೀಮಿತ ಸಂಖ್ಯೆಯ ಪಾಸ್‌ಗಳನ್ನು ಮಾತ್ರ ವ್ಯವಸ್ಥೆ ಮಾಡಲಾಗಿದೆ. ಶನಿವಾರದಿಂದ ರಾಮಮಂದಿರಕ್ಕೆ ಭೇಟಿ ನೀಡುವ ಭಕ್ತರು ರಾಮ ದರ್ಬಾರ್ ಅನ್ನೂ ಪ್ರವೇಶಿಸಬಹುದು. ರಾಮಲಲ್ಲಾ ದರ್ಶನಕ್ಕೆ ನೀಡಲಾಗುವ ಪಾಸ್‌ಗಳಂತೆಯೇ, ರಾಮ ದರ್ಬಾರ್‌ಗೂ ಪಾಸ್‌ಗಳು ಲಭ್ಯವಿರುತ್ತವೆ’ ಎಂದಿದ್ದಾರೆ.
ಕಾಶ್ಮೀರ ಪಾಕ್ ಭಾಗವಾಗಿ ತೋರಿಸಿದ ನಕ್ಷೆ ಪೋಸ್ಟ್:
ಕ್ಷಮೆಯಾಚಿಸಿದ ಇಸ್ರೇಲ್
ಜೆರುಸಲೇಂ: ಭಾರತದ ಮುಕಟ ಜಮ್ಮು ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ತೋರಿಸಿ ನಕ್ಷೆಯನ್ನು ಜಾಲತಾಣದಲ್ಲಿ ಇಸ್ರೇಲ್ ಪೋಸ್ಟ್ ಮಾಡಿದ್ದು, ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ಭಾರತದ ಕ್ಷಮೆ ಕೇಳಿದೆ. ಇಸ್ರೇಲ್ ರಕ್ಷಣಾ ಅಧಿಕೃತ ಎಕ್ಸ್‌ನಲ್ಲಿ ಇರಾನಿನ ಕ್ಷಿಪಣಿಗಳ ವ್ಯಾಪ್ತಿ ತೋರಿಸಲು ಪೋಸ್ಟ್‌ವೊಂದನ್ನು ಮಾಡಿತ್ತು. ಅದರಲ್ಲಿ ಭಾರತ ನಕಾಶೆಯನ್ನು ತಪ್ಪಾಗಿ ಚಿತ್ರಿಸಿ, ಜಮ್ಮು ಕಾಶ್ಮೀರವನ್ನು ಪಾಕಿಸ್ತಾನದ ಭಾಗ ಎಂದು ಬಿಂಬಿಸಿತ್ತು. ಇದಕ್ಕೆ ಭಾರತೀಯರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ‘ ರಾಜತಾಂತ್ರಿಕ ವಿಚಾರದಲ್ಲಿ ಯಾರೂ ನಿಜವಾದ ಸ್ನೇಹಿತರಿಲ್ಲ. ಭಾರತ ಏಕೆ ತಟಸ್ಥವಾಗಿದೆ ಎಂಬುದು ಈಗ ಅರ್ಥವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ರಕ್ಷಣಾ ಪಡೆ ಕ್ಷಮೆಯಾಚಿಸಿದ್ದು, ‘ ಈ ಪೋಸ್ಟ್ ಆ ಪ್ರದೇಶದ ವಿವರಣೆಯಾಗಿದೆ. ನಕ್ಷೆಯು ಗಡಿಗಳನ್ನು ನಿಖರವಾಗಿ ಚಿತ್ರಿಸುವಲ್ಲಿ ವಿಫಲವಾಗಿದೆ. ಚಿತ್ರದಿಂದ ಉಂಟಾದ ತಪ್ಪಿಗೆ ಕ್ಷಮೆಯಾಚಿಸುತ್ತೇವೆ’ ಎಂದಿದೆ.
ಎಸ್‌ಬಿಐ ಸಾಲದ ಬಡ್ಡಿ ದರ ಶೇ.0.50 ಇಳಿಕೆ
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆದ ಎಸ್‌ಬಿಐ, ಸಾಲದ ಮೇಲಿನ ಬಡ್ಡಿದರವನ್ನು ಶೇ.0.5ರಷ್ಟು ಇಳಿಕೆ ಮಾಡಿದೆ. ಇದರಿಂದಾಗಿ ಗೃಹ, ವಾಹನ ಮತ್ತು ಇತರೆ ಸಾಲಗಳ ಬಡ್ಡಿ ದರ ಇಳಿಕೆಯಾಗಲಿದೆ.
ಈ ಬದಲಾವಣೆ ಅನ್ವಯ ಇಬಿಎಲ್‌ಆರ್ ಆಧರಿತ ಬಡ್ಡಿದರವು ಶೇ.8.65ರಿಂದ ಶೇ.8.15ಕ್ಕೆ ಇಳಿಕೆಯಾಗಿದೆ. ಈ ಬದಲಾವಣೆ ಜೂ.15ರಿಂದ ಜಾರಿಗೆ ಬರಲಿದೆ.
ಇದೇ ವೇಳೆ ಕೆಲವೊಂದು ವಿಶೇಷ ಠೇವಣಿಗಳ ಮೇಲಿನ ಬಡ್ಡಿದರವನ್ನು ಕೂಢಾ ಎಸ್‌ಬಿಐ ಇಳಿಸಿದೆ.
269 ಹೊಸ ಕೋವಿಡ್ ಕೇಸ್, 9 ಸಾವು: ಸಕ್ರಿಯ ಪ್ರಕರಣ 7400ಕ್ಕೆಏರಿಕೆ
ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 269 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ಇದರೊಂದಿಗೆ ಸಕ್ರಿಯ ಕೋವಿಡ್ ಪ್ರಕರಣ 7,400ಕ್ಕೆ ಏರಿದೆ. ಈ ನಡುವೆ 9 ಹೊಸ ಸಾವು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.
ಕರ್ನಾಟಕದಲ್ಲಿ ಒಂದೇ ದಿನ 132 ಸಕ್ರಿಯ ಕೋವಿಡ್ ಪ್ರಕರಣ ವರದಿಯಾಗಿದ್ದು ದಾಖಲೆಯಾಗಿದೆ. ಗುಜರಾತ್ 79, ಕೇರಳ 54, ಮಧ್ಯಪ್ರದೇಶ 20, ಸಿಕ್ಕಿಂ 11, ತಮಿಳುನಾಡು 12 ಮತ್ತು ಹರಿಯಾಣದಲ್ಲಿ 9 ಸಕ್ರಿಯ ಪ್ರಕರಣ ವರದಿಯಾಗಿವೆ ಎಂದು ಸಚಿವಾಲಯದ ದತ್ತಾಂಶ ತೋರಿಸಿದೆ.
ಕೋವಿಡ್‌ನಿಂದ ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 4, ಕೇರಳದಲ್ಲಿ 3, ತಮಿಳುನಾಡು ಮತ್ತು ರಾಜಸ್ತಾನದಲ್ಲಿ ತಲಾ ಒಂದು ಕೋವಿಡ್ ಸಾವು ಪ್ರಕರಣ ವರದಿಯಾಗಿದೆ. 2024ರ ಜ.1ರಿಂದ ಇದುವರೆಗೆ 87 ಕೋವಿಡ್ ಸಾವು ಸಂಭವಿಸಿವೆ.
ಕಳೆದ 24 ಗಂಟೆಗಳಲ್ಲಿ 991 ಮಂದಿ ಕೋವಿಡ್‌ನಿಂದ ಗುಣಮುಖಗಿದ್ದಾರೆ ಎಂದು ದತ್ತಾಂಶ ಹೇಳಿದೆ.
ಕೇರಳ ಅತಿಹೆಚ್ಚು ಕೋವಿಡ್ ಬಾಧಿತ ರಾಜ್ಯವಾಗಿದೆ. ಅಲ್ಲಿ ಸಕ್ರಿಯ ಪ್ರಕರಣಗಳು 2,109ಕ್ಕೆ ಏರಿದೆ.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))