ನದಿ ಅಡಿ ಮೆಟ್ರೋ!: ದೇಶದ ಮೊದಲ ರೈಲು ಉದ್ಘಾಟಿಸಿದ ಪ್ರಧಾನಿ ಮೋದಿ

| Published : Mar 07 2024, 01:48 AM IST / Updated: Mar 07 2024, 07:54 AM IST

ನದಿ ಅಡಿ ಮೆಟ್ರೋ!: ದೇಶದ ಮೊದಲ ರೈಲು ಉದ್ಘಾಟಿಸಿದ ಪ್ರಧಾನಿ ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಮೊದಲ ನದಿಯಾಳದ ಮೆಟ್ರೋ ಸೇರಿದಂತೆ ದೇಶದಾದ್ಯಂತ ಬಹು ಮೆಟ್ರೋ ಸೇವೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು.

ಕೊಲ್ಕತಾ: ಭಾರತದ ಮೊದಲ ನದಿಯಾಳದ ಮೆಟ್ರೋ ಸೇರಿದಂತೆ ದೇಶದಾದ್ಯಂತ ಬಹು ಮೆಟ್ರೋ ಸೇವೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು. ಬಳಿಕ ಮೆಟ್ರೋ ರೈಲಿನಲ್ಲಿ ಸಂಚರಿಸಿದ ಪ್ರಧಾನಿ ಮೋದಿ ರೈಲಿನೊಳಗೆ ವಿದ್ಯಾರ್ಥಿಗಳ ಜೊತೆ ಕೆಲ ಹೊತ್ತು ಸಂವಾದ ನಡೆಸಿದರು.

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ಸಾಲ್ಟ್‌ ಲೇಕ್‌ನಿಂದ ಹೌರಾಗೆ ಸಂಪರ್ಕ ಕಲ್ಪಿಸಲು ನದಿಯಾಳದ ಮೆಟ್ರೋ ಮಾರ್ಗ ನಿರ್ಮಿಸಲಾಗಿದೆ. ಹೂಗ್ಲಿ ನದಿಯ ಕೆಳಗೆ ಈ ಮಾರ್ಗ ನಿರ್ಮಾಣವಾಗಿದೆ. 

ಇದಕ್ಕೆ 4,965 ಕೋಟಿ ವೆಚ್ಚ ಮಾಡಲಾಗಿದೆ. ಹೊಸದಾಗಿ ನಿರ್ಮಿಸಲಾದ ಸುರಂಗದ ಕೆಳಭಾಗವು ನದಿಯ ಮೇಲ್ಮೈಯಿಂದ 26 ಮೀ. ಒಳಗಿದೆ. ರೈಲುಗಳು ನದಿಯ ತಳದಿಂದ 16 ಮೀಟರ್ ಕೆಳಗೆ ಚಲಿಸುತ್ತವೆ. 

ನೀರೊಳಗಿನ ಸುರಂಗ ಮಾರ್ಗ 520 ಮೀ. ಇದ್ದು ಇಲ್ಲಿ 45 ಸೆಕೆಂಡು ಕಾಲ ರೈಲು ಸಂಚರಿಸುತ್ತದೆ. ಈ ಮಾರ್ಗ ನಿರ್ಮಾಣದಿಂದ ಹೌರಾ ಹಾಗೂ ಸಿಯಾಲ್‌ದಹ ನಡುವಿನ ಪ್ರಯಾಣ ಅವಧಿ1.5 ತಾಸಿನಿಂದ 40 ನಿಮಿಷಕ್ಕೆ ತಗ್ಗಲಿದೆ. ರಸ್ತೆ ಮೂಲಕ ಇಲ್ಲಿ ಸಂಚರಿಸಲು 1.5 ತಾಸು ಬೇಕು.

ಇದರ ಜೊತೆಗೆ, ದೆಹಲಿ-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್‌ನ ದುಹೈ-ಮೋದಿನಗರ ವಿಭಾಗ, ಪುಣೆ ಮೆಟ್ರೋದ ರೂಬಿ ಹಾಲ್ ಕ್ಲಿನಿಕ್-ರಾಮ್‌ವಾಡಿ ಸ್ಟ್ರೆಚ್, ಕೊಚ್ಚಿ ಮೆಟ್ರೋದ ಎಸ್‌ಎನ್ ಜಂಕ್ಷನ್‌ನಿಂದ ತ್ರಿಪುನಿಥುರಾ ವಿಭಾಗ ಮತ್ತು ಆಗ್ರಾ ಮೆಟ್ರೋದ ತಾಜ್ ಈಸ್ಟ್ ಗೇಟ್-ಮಂಕಮೇಶ್ವರ ವಿಭಾಗವನ್ನು ಮೋದಿ ಉದ್ಘಾಟಿಸಿದರು. ಪಿಂಪ್ರಿ ಚಿಂಚ್‌ವಾಡ್ ಮತ್ತು ನಿಗ್ಡಿ ನಡುವೆ ಪುಣೆ ಮೆಟ್ರೋ ವಿಸ್ತರಣೆಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ಮಾಡಿದರು.