ಸಾರಾಂಶ
ವಿಶ್ವ ಕ್ರೈಸ್ತರ ಜಗದ್ಗುರು ಇನ್ನಿಲ್ಲ । ಶೋಕಸಾಗರದಲ್ಲಿ 140 ಕೋಟಿ ಕ್ಯಾಥೋಲಿಕ್ ಕ್ರೈಸ್ತರು - ಅನಾರೋಗ್ಯದಿಂದ ವಿಧಿವಶ । ವ್ಯಾಟಿಕನ್ ಹೊರಗೆ ಅಂತ್ಯಕ್ರಿಯೆಗೆ ಸಿದ್ಧತೆ: 100 ವರ್ಷಗಳಲ್ಲಿ ಇದೇ ಮೊದಲು
ಈಸ್ಟರ್ ದರ್ಶನದ
ಮರುದಿನ ನಿಧನ
12 ವರ್ಷದಿಂದ ಕ್ರೈಸ್ತರ ಪರಮೋಚ್ಚ ಗುರುವಾಗಿದ್ದ ಪೋಪ್ ಫ್ರಾನ್ಸಿಸ್ (88), ಸುದೀರ್ಘ ಅನಾರೋಗ್ಯಪೀಡಿತರಾಗಿದ್ದರು. ಈಸ್ಟರ್ ಸಂಡೇ ನಿಮಿತ್ತ ಸಾರ್ವಜನಿಕ ದರ್ಶನ ನೀಡಿ, ಸಂದೇಶ ಕೊಟ್ಟಿದ್ದರು. ಮರುದಿನವಾದ ಸೋಮವಾರ ಬೆಳಗ್ಗೆ 7.35ಕ್ಕೆ ಇಹಲೋಕ ತ್ಯಜಿಸಿದ್ದಾರೆ.
ಮೂರು ಬಾರಿ ಕರೆದರೂ
ಏಳದಿದ್ದರೆ ಸಾವು ಪ್ರಕಟ!
ಪೋಪ್ ಮರಣವನ್ನು ಅಧಿಕೃತವಾಗಿ ಘೋಷಣೆ ಮಾಡಲೂ ಪ್ರಕ್ರಿಯೆ ಇದೆ. ವ್ಯಾಟಿಕನ್ ಆಡಳಿತಾಧಿಕಾರಿ ಅವರು ಸನಿಹಕ್ಕೆ ಹೋಗಿ ಮೂರು ಬಾರಿ ಪೋಪ್ ಹೆಸರನ್ನು ಕೂಗುತ್ತಾರೆ. ಪ್ರತಿಕ್ರಿಯೆ ಬಾರದಿದ್ದರೆ ಮರಣವಾರ್ತೆಯನ್ನು ಪ್ರಕಟಿಸುತ್ತಾರೆ. ಪೋಪ್ ಅವರ ಹಣೆಗೆ ಬೆಳ್ಳಿಯ ಸುತ್ತಿಗೆಯಿಂದ ಮೂರು ಬಾರಿ ಮೆದುವಾಗಿ ಕುಟ್ಟಿ ಸಾವು ಘೋಷಿಸುವ ಪರಿಪಾಠ 1963ರವರೆಗೂ ಇತ್ತು.
ಪೋಪ್ ಕೋಣೆಗೆ ಬೀಗ,
6 ದಿನದಲ್ಲಿ ಅಂತ್ಯಕ್ರಿಯೆ
ಮರಣವಾರ್ತೆ ಪ್ರಕಟ ಬಳಿಕ ಆಡಳಿತಾಧಿಕಾರಿ ಪೋಪ್ ವಾಸ್ತವ್ಯ ಸ್ಥಳಕ್ಕೆ ಬೀಗ ಜಡಿಯುತ್ತಾರೆ. ಅವರ ಉಂಗುರ ಹಾಗೂ ಸೀಲ್ ನಾಶಪಡಿಸುವ ಮೂಲಕ ಪೋಪ್ ಆಳ್ವಿಕೆ ಮುಗಿದಿದೆ ಎಂದು ಸೂಚಿಸುತ್ತಾರೆ. ಪೋಪ್ ನಿಧನದ 4-6 ದಿನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ವ್ಯಾಟಿಕನ್ ಹೊರಗೆ
ಪೋಪ್ ಅಂತ್ಯಕ್ರಿಯೆ
ನಗರವೇ ಒಂದು ದೇಶವಾಗಿರುವ, ಇಟಲಿಯಿಂದ ಸುತ್ತುವರೆದಿರುವ ವ್ಯಾಟಿಕನ್‌ನಲ್ಲಿ ಸಾಮಾನ್ಯವಾಗಿ ಪೋಪ್‌ಗಳ ಅಂತ್ಯಕ್ರಿಯೆ ನೆರವೇರುತ್ತದೆ. ಆದರೆ ಫ್ರಾನ್ಸಿಸ್ ಬೇರೆ ಕಡೆ (ರೋಮ್‌ನಲ್ಲಿ) ಅಂತ್ಯಕ್ರಿಯೆ ನಡೆಸುವಂತೆ ಕೋರಿದ್ದಾರೆ. 100 ವರ್ಷಗಳಲ್ಲಿ ಇದೇ ಮೊದಲ ಬಾರಿ ಪೋಪ್ ಒಬ್ಬರ ಅಂತ್ಯಕ್ರಿಯೆ ವ್ಯಾಟಿಕನ್‌ನಲ್ಲಿ ನಡೆಯುತ್ತಿಲ್ಲ!
ಹೊಸ ಪೋಪ್ ಆಯ್ಕೆ ಹೇಗೆ?
ಪೋಪ್ ನಿಧನದ 15-20 ದಿನ ಬಳಿಕ ನೂತನ ಪೋಪ್ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. 80 ವರ್ಷದೊಳಗಿನ ಕಾರ್ಡಿನಲ್‌ಗಳು ವ್ಯಾಟಿಕನ್‌ಗೆ ಆಗಮಿಸುತ್ತಾರೆ. ರಹಸ್ಯ ಮತದಾನ ಉದ್ದೇಶ ಸಲುವಾಗಿ ಅವರನ್ನು ಒಂದು ಸ್ಥಳಕ್ಕೆ ಸೇರಿಸಿ ಹೊರಗಿನಿಂದ ಬೀಗ ಹಾಕಲಾಗುತ್ತದೆ. ಬಾಹ್ಯ ಪ್ರಪಂಚದಿಂದ ಅವರು ಸಂಪರ್ಕ ಕಳೆದುಕೊಳ್ಳುತ್ತಾರೆ. ದೂರವಾಣಿ ಕರೆ ಸೌಲಭ್ಯೂ ಇರುವುದಿಲ್ಲ. ಹಲವು ಸುತ್ತಿನ ಮತದಾನ ಪ್ರಕ್ರಿಯೆ ನಡೆಯುತ್ತದೆ.
ಕಪ್ಪು ಹೊಗೆ, ಬಿಳಿ ಹೊಗೆ:ನೂತನ ಪೋಪ್ ಆಯ್ಕೆ
ಕಾರ್ಡಿನಲ್‌ಗಳು ಅಭ್ಯರ್ಥಿಗಳ ಪರ ಮತ ಚಲಾವಣೆ ಮಾಡುತ್ತಾರೆ. 3ನೇ 2ರಷ್ಟು ಬಹುಮತ ಪಡೆದವರು ಪೋಪ್ ಆಗುತ್ತಾರೆ. ಬಹುಮತ ಬಾರದಿದ್ದರೆ ಚಲಾವಣೆ ಮಾಡಿದ ಮತಗಳನ್ನು ಸುಡಲಾಗುತ್ತದೆ. ಆಗ ವ್ಯಾಟಿಕನ್‌ನಲ್ಲಿ ಕಪ್ಪು ಹೊಗೆ ಕಾಣಿಸುತ್ತದೆ. ಅದರರ್ಥ ಆಯ್ಕೆ ಪೂರ್ಣವಾಗಿಲ್ಲ ಎಂದು. ಹಲವು ಸುತ್ತಿನ ಮತದಾನ ಬಳಿಕ 3ನೇ 2ರಷ್ಟು ಬಹುಮತದೊಂದಿಗೆ ಒಬ್ಬರು ಆಯ್ಕೆಯಾದ ಬಳಿಕ ವ್ಯಾಟಿಕನ್‌ನಲ್ಲಿ ಬಿಳಿ ಹೊಗೆ ಕಾಣಿಸಿಕೊಳ್ಳುತ್ತದೆ. ಅದರರ್ಥ- ಹೊಸ ಪೋಪ್ ಆಯ್ಕೆಯಾಗಿದ್ದಾರೆ!
ಕರುಣೆ, ವಿನಮ್ರತೆ ಸಂಕೇತಪೋಪ್ ಫ್ರಾನ್ಸಿಸ್ ಅವರನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಯಾವಾಗಲೂ ಕರುಣೆ, ವಿನಮ್ರತೆ ಮತ್ತು ಆಧ್ಯಾತ್ಮಿಕ ಧೈರ್ಯದ ಸಂಕೇತವಾಗಿ ನೆನಪಿಸಿಕೊಳ್ಳುತ್ತಾರೆ. ಭಾರತದ ಜನರ ಮೇಲಿನ ಅವರ ವಾತ್ಸಲ್ಯ ಸದಾ ಸ್ಮರಣೀಯ. ದೇವರ ಸಾನ್ನಿಧ್ಯದಲ್ಲಿ ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ.
- ನರೇಂದ್ರ ಮೋದಿ ಪ್ರಧಾನಿ