ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಹಿಂಸೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದಿರುವ ಅಮಿತ್ ಮಾಳವೀಯ, ‘ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ನಡೆದ ಗುಂಡಿನ ದಾಳಿಗೆ ರಾಹುಲ್ ಗಾಂಧಿ ವ್ಯಕ್ತಪಡಿಸಿರುವ ಖಂಡನೆಯು ಸಾಚಾ ಅಲ್ಲ’ ಎಂದಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಹಿಂಸೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದಿರುವ ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ‘ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ನಡೆದ ಗುಂಡಿನ ದಾಳಿಗೆ ರಾಹುಲ್ ಗಾಂಧಿ ವ್ಯಕ್ತಪಡಿಸಿರುವ ಖಂಡನೆಯು ಸಾಚಾ ಅಲ್ಲ’ ಎಂದಿದ್ದಾರೆ.
ಟ್ರಂಪ್ ಹತ್ಯೆ ಯತ್ನವನ್ನು ರಾಹುಲ್ ಖಂಡಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಅವರು, ‘ಚುನಾವಣೆಯಲ್ಲಿ 3ನೇ ಬಾರಿಯೂ ಸೋತಿರುವ ರಾಹುಲ್ ಗಾಂಧಿ, ಮೋದಿ ವಿರುದ್ಧದ ಹಿಂಸೆಯನ್ನು ಪ್ರೋತ್ಸಾಹಿಸಿ ಸಮರ್ಥಿಸಿಕೊಳ್ಳುತ್ತಾರೆ’ ಎನ್ನುತ್ತ ಪಂಜಾಬ್‌ನಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಭದ್ರತಾ ಲೋಪ ಉಂಟಾಗಿ ಮೋದಿ ಫ್ಲೈಓವರ್ ಮೇಲೆ ಸಿಲುಕಿದ್ದ ಘಟನೆಯನ್ನು ನೆನಪಿಸಿದ್ದಾರೆ.
‘ಟ್ರಂಪ್ ಅಧಿಕಾರ ಹಿಡಿದರೆ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎಂದು ಅವರ ಟೀಕಾಕಾರರು ಹೇಳುವಂತೆ ಮೋದಿ ಆಡಳಿತದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು ವಿಪಕ್ಷ ಕಾಂಗ್ರೆಸ್ ಹೇಳುತ್ತದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಅವರನ್ನು ಸರ್ವಾಧಿಕಾರಿ ಎನ್ನುತ್ತದೆ’ ಎಂದು ಆರೋಪಿಸಿದರು.