ಟೆಹ್ರಾನ್‌: ಇಡೀ ಇರಾನ್‌ ಅನ್ನು ಮಂಗಳವಾರ ರಾತ್ರಿ ನಾಶ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುಡುಗಿದ ಬೆನ್ನಲ್ಲೇ, ಇರಾನ್ ಕೂಡ ಎದಿರೇಟು ನೀಡಲು ಹಾಗೂ ಮಾನವ ಗುರಾಣಿ ಬಳಸಿ ತನ್ನ ಮೂಲಸೌಕರ್ಯ ಘಟಕಗಳನ್ನು ರಕ್ಷಿಸಿಕೊಳ್ಳಲು ಮುಂದಾಗಿದೆ.

‘ನಮ್ಮಲ್ಲಿ 1.4 ಕೋಟಿ ಜನ ದೇಶರಕ್ಷಣೆಗೆ ಪ್ರಾಣತ್ಯಾಗ ಮಾಡಲೂ ಸಿದ್ಧರಿದ್ದಾರೆ. ನಾನೂ ಕೂಡ ಅವರಲ್ಲಿ ಒಬ್ಬನಾಗಿದ್ದೇನೆ’ ಎಂದು ಇರಾನ್‌ ಅಧ್ಯಕ್ಷ ಮಸೌದ್‌ ಪೆಜಶ್ಕಿಯಾನ್‌ ಹೇಳಿದ್ದಾರೆ. ಇದೇ ವೇಳೆ, ಅತ್ತ ಅಮೆರಿಕ ಮೊದಲು ವಿದ್ಯುತ್‌ ಸ್ಥಾವರಗಳನ್ನೇ ಗುರಿಯಾಗಿಸಿ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ, ಸರ್ಕಾರದ ಕರೆಯ ಮೇರೆಗೆ ಅವುಗಳ ಸುತ್ತ ಇರಾನಿಗರು ಮಾನವ ಸರಪಳಿ ನಿರ್ಮಾಣ ಆರಂಭಿಸಿದ್ದಾರೆ.ಇದೇ ವೇಳೆ ಇರಾನ್‌ನ ಅರೆಸೇನಾಪಡೆಯಾದ ರೆವಲ್ಯೂಷನರಿ ಗಾರ್ಡ್ಸ್‌ ಕೂಡಾ ನಿಮ್ಮ ಮಕ್ಕಳನ್ನು ದೇಶದ ಆಯಕಟ್ಟಿನ ಪ್ರದೇಶಗಳನ್ನು ಕಾಯಲು ಕಳಿಸಿಕೊಡಿ ಎಂದು ಪೋಷಕರಿಗೆ ಮನವಿ ಮಾಡಿದೆ. ನಿಮ್ಮ ಮಕ್ಕಳ ಕೈಹಿಡಿದುಕೊಂಡು ಬೀದಿಗೆ ಬನ್ನಿ ಎಂದು ಕರೆ ಕೊಟ್ಟಿದೆ.

ಮಂಗಳವಾರ ರಾತ್ರಿ 8 ಗಂಟೆ ಒಳಗಾಗಿ ಹೋರ್ಮುಜ್‌ ಜಲಸಂಧಿಯನ್ನು ಹಡಗುಗಳ ಓಡಾಟಕ್ಕೆ ಮುಕ್ತಗೊಳಿಸದಿದ್ದಲ್ಲಿ ಭೀಕರ ದಾಳಿ ನಡೆಸುವುದಾಗಿ ಟ್ರಂಪ್‌ ಆರ್ಭಟಿಸಿದ್ದರು. ಇದಕ್ಕೆ ಬೆದರದ ಇರಾನಿಗರು, ಕೊನೆಯ ಉಸಿರಿರುವ ವರೆಗೂ ಮಾನವ ಗುರಾಣಿ ಮೂಲಕ ದೇಶಕ್ಕಾಗಿ ಹೋರಾಡುವ ಶಪಥಗೈದಿದ್ದಾರೆ.

ಈ ಮೂಲಕ ಒಂದೊಮ್ಮೆ ಅಮೆರಿಕ ಆ ಪ್ರದೇಶದ ಮೇಲೆ ಸ್ಫೋಟಕ ಸುರಿದರೆ ಅಮಾಯಕ ಜನರನ್ನು ಅಮಾನುಷವಾಗಿ ಹತ್ಯೆಗೈದ ಆರೋಪ ಹೊರಿಸಬಹುದು ಎಂಬುದು ಅವರ ಲೆಕ್ಕಾಚಾರ ಎಂದು ವಿಶ್ಲೇಷಿಸಲಾಗುತ್ತಿದೆ.