ಸಾರಾಂಶ
ನ್ಯೂಯಾರ್ಕ್: ಲಸಿಕೆಗಳನ್ನು ಖಂಡತುಂಡವಾಗಿ ವಿರೋಧಿಸುವ ಹಾಗೂ ಲಸಿಕೆಗಳಿಂದಾಗಿ ಆಟಿಸಂ ಮತ್ತು ಇನ್ನಿತರೆ ಆರೋಗ್ಯ ಸಮಸ್ಯೆಗಳು ಬರುತ್ತಿವೆ ಎಂದು ಪ್ರಬಲವಾಗಿ ವಾದಿಸುವ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆರೋಗ್ಯ ಸಚಿವರಾಗಿ ನೇಮಕ ಮಾಡಿದ್ದಾರೆ.
ರಾಬರ್ಟ್ ಕೆನಡಿ ಅವರು ಲಸಿಕೆ ವಿರುದ್ಧ ಈ ಹಿಂದೆ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ಅಪಾಯಕಾರಿ ಎಂದು ವೈದ್ಯಕೀಯ ಕ್ಷೇತ್ರದ ತಜ್ಞರು ಕರೆದಿದ್ದರು. ಇದೀಗ ಅವರ ಕೈಗೇ ಅಮೆರಿಕದ ಔಷಧ, ಲಸಿಕೆ, ಆಹಾರ ಸುರಕ್ಷತೆ, ವೈದ್ಯ ಸಂಶೋಧನೆ ಹಾಗೂ ಸಾಮಾಜಿಕ ಸುರಕ್ಷತಾ ಜಾಲಗಳನ್ನು ನೋಡಿಕೊಳ್ಳುವ ಆರೋಗ್ಯ ಇಲಾಖೆಯನ್ನು ನೀಡಿರುವುದು ಅಮೆರಿಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಸುದೀರ್ಘ ಅವಧಿಯಿಂದ ಅಮೆರಿಕನ್ನರನ್ನು ಕೈಗಾರಿಕಾ ಆಹಾರ ಸಂಕೀರ್ಣ ಹಾಗೂ ಔಷಧ ಕಂಪನಿಗಳು ತುಳಿದು ಹಾಕಿವೆ. ಆ ಕಂಪನಿಗಳು ವಂಚನೆ, ತಪ್ಪು ಮಾಹಿತಿಯಿಂದ ಕೂಡಿವೆ. ಈ ಸಾಂಕ್ರಾಮಿಕ ರೋಗ ಸರಣಿಯನ್ನು ಕೆನಡಿ ಅವರು ಕೊನೆಗಾಣಿಸಿ, ಅಮೆರಿಕವನ್ನು ಮಹಾನ್ ಆರೋಗ್ಯಯುತ ದೇಶವಾಗಿ ಪರಿವರ್ತಿಸಲಿದ್ದಾರೆ ಎಂದು ಟ್ರಂಪ್ ಅವರು ತಿಳಿಸಿದ್ದಾರೆ.
ರಾಬರ್ಟ್ ಕೆನಡಿ ಅವರು ಪ್ರಭಾವಿ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಅವರ ತಂದೆ ರಾಬರ್ಟ್ ಎಫ್. ಕೆನಡಿ ಅಮೆರಿಕದ ಮಾಜಿ ಅಟಾರ್ನಿ ಜನರಲ್ ಆಗಿದ್ದರು. ಅಮೆರಿಕ ಅಧ್ಯಕ್ಷರಾಗಿದ್ದ ಜಾನ್ ಎಫ್.ಕೆನಡಿ ಅವರಿಗೆ ಕೆನಡಿ ಜೂನಿಯರ್ ಸಂಬಂಧಿಯಾಗಿದ್ದಾರೆ.