ಸಾರಾಂಶ
ಮಾಸ್ಕೋ: ಉದ್ಯೋಗದ ಹೆಸರಲ್ಲಿ ಭಾರತೀಯರನ್ನು ಅಕ್ರಮವಾಗಿ ಕರೆದೊಯ್ದು ಅವರನ್ನು ರಷ್ಯಾ ಸೇನೆಗೆ ಮಾಡಿಕೊಂಡ ಪ್ರಕರಣದಲ್ಲಿ ಪ್ರಧಾನಿ ಮೋದಿ ಮನವಿಗೆ ಸ್ಪಂದಿಸಿರುವ ರಷ್ಯಾ ಸರ್ಕಾರ, ರಷ್ಯಾ ಸೇನೆಯಲ್ಲಿರುವ ಎಲ್ಲಾ ಭಾರತೀಯರ ಬಿಡುಗಡೆಗೆ ಸಮ್ಮತಿಸಿದೆ ಎನ್ನಲಾಗಿದೆ.
.ದುಬೈ ಮೂಲದ ವ್ಯಕ್ತಿಯೊಬ್ಬ ಆನ್‌ಲೈನ್ ಮೂಲಕ ಭಾರತೀಯರನ್ನು ಸಂಪರ್ಕಿಸಿ ಅವರಿಗೆ ರಷ್ಯಾದಲ್ಲಿ ಭಾರೀ ವೇತನದ ಉದ್ಯೋಗದ ನೀಡುವ ಆಫರ್‌ಗಳನ್ನು ನೀಡುತ್ತಿದ್ದ. ಇದನ್ನು ನಂಬಿ ಲಕ್ಷಾಂತರ ರು. ಕೊಟ್ಟು ರಷ್ಯಾಕ್ಕೆ ಬಂದ ಭಾರತೀಯ ಯುವಕರನ್ನು ಅಕ್ರಮವಾಗಿ ರಷ್ಯಾ ಸೇನೆಗೆ ಸೇರಿಸಿಕೊಂಡು ಅವರನ್ನು ಉಕ್ರೇನ್ ವಿರುದ್ಧ ಯುದ್ಧ ಮಾಡಲು ಯುದ್ಧ ಭೂಮಿಗೆ ಕಳುಹಿಸಿಕೊಡಲಾಗಿತ್ತು.
ಈ ವಿಷಯವನ್ನು ಕೆಲ ಭಾರತೀಯರ ಯುವಕರು ಯುದ್ಧ ಭೂಮಿಯಿಂದಲೇ ವಿಡಿಯೋ ಮಾಡಿ ಭಾರತಕ್ಕೆ ಕಳುಹಿಸಿಕೊಟ್ಟಿದ್ದರು. ಹೀಗೆ ತೆರಳಿದ್ದವರ ಪೈಕಿ ಕೆಲವರು ಯುದ್ಧ ಭೂಮಿಯಲ್ಲೇ ಸಾವನ್ನಪ್ಪಿದ್ದರು.
ಈ ಹಿನ್ನೆಲೆಯಲ್ಲಿ ಇಂಥ ನೇಮಕ ಮಾಡಿಕೊಳ್ಳದಂತೆ ಮತ್ತು ಈಗಾಗಲೇ ಸೇನೆ ಸೇರಿದವರನ್ನು ಬಿಡುಗಡೆ ಮಾಡುವಂತೆ ಭಾರತದ ವಿದೇಶಾಂಗ ಈ ಹಿಂದೆಯೇ ರಷ್ಯಾಕ್ಕೆ ಮನವಿ ಮಾಡಿತ್ತು. ಜೊತೆಗೆ ಸೋಮವಾರ ರಷ್ಯಾ ಅಧ್ಯಕ್ಷ ಪುಟಿನ್ ನೀಡಿದ ಔತಣ ಕೂಟದ ವೇಳೆಯೂ ಮೋದಿ ಮತ್ತೆ ಈ ವಿಷಯ ಪ್ರಸ್ತಾಪಿಸಿದರು ಎನ್ನಲಾಗಿದೆ. ಈ ವೇಳೆ ಎಲ್ಲಾ ಭಾರತೀಯರ ಬಿಡುಗಡೆ ಕುರಿತು ಪುಟಿನ್ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಉಕ್ರೇನ್ ಬಿಕ್ಕಟ್ಟು ನಿವಾರಣೆ ಯತ್ನ:ಮೋದಿಗೆ ಪುಟಿನ್ ಧನ್ಯವಾದ
ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷವನ್ನು ಶಾಂತಿ ಮಾತುಕತೆ ಮೂಲಕ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದ ಪ್ರಧಾನಿ ಮೋದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಧನ್ಯವಾದ ಸಲ್ಲಿಸಿದ್ದಾರೆ. ಕ್ರೆಮ್ಲಿನ್‌ನಲ್ಲಿ ಮೋದಿ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ‘ಉಕ್ರೇನ್ ನಡುವಿನ ಸಂಘರ್ಷವನ್ನು ಶಾಂತಿ ಮಾರ್ಗವಾಗಿ ಪರಿಹರಿಸಿಕೊಳ್ಳಲು ನೀವು ನೀಡಿದ ಗಮನಕ್ಕಾಗಿ ನಾನು ಕೃತಜ್ಞನಾಗಿದ್ದೇನೆ’ ಎಂದು ಹೇಳಿದ್ದಾರೆ.