ಉಕ್ರೇನ್‌ನಿಂದ ರಷ್ಯಾ ಅಣ್ವಸ್ತ್ರ ಪಡೆ ಮುಖ್ಯಸ್ಥ ಕಿರಿಲೋವ್‌ ಹತ್ಯೆ

| Published : Dec 18 2024, 12:46 AM IST

ಸಾರಾಂಶ

ಉಕ್ರೇನ್-ರಷ್ಯಾ ಯುದ್ಧ ನಡೆಯುತ್ತಿರುವ ನಡುವೆಯೇ ಉಕ್ರೇನಿ ಗುಪ್ತಚರ ಸಂಸ್ಥೆಯು ರಷ್ಯಾ ಅಣ್ವಸ್ತ್ರ ಪಡೆ ಮುಖ್ಯಸ್ಥ ಲೆ.ಜ. ಇಗ್ರೊ ಕಿರಿಲೋವ್‌ರನ್ನು ಹತ್ಯೆ ಮಾಡಿದ್ದಾಗಿ ಹೇಳಿಕೊಂಡಿದೆ.

ಮಾಸ್ಕೋ: ಉಕ್ರೇನ್-ರಷ್ಯಾ ಯುದ್ಧ ನಡೆಯುತ್ತಿರುವ ನಡುವೆಯೇ ಉಕ್ರೇನಿ ಗುಪ್ತಚರ ಸಂಸ್ಥೆಯು ರಷ್ಯಾ ಅಣ್ವಸ್ತ್ರ ಪಡೆ ಮುಖ್ಯಸ್ಥ ಲೆ.ಜ. ಇಗ್ರೊ ಕಿರಿಲೋವ್‌ರನ್ನು ಹತ್ಯೆ ಮಾಡಿದ್ದಾಗಿ ಹೇಳಿಕೊಂಡಿದೆ.

ಮಾಸ್ಕೋದಲ್ಲಿ ಸ್ಕೂಟರ್‌ನಲ್ಲಿ ಅಳವಡಿಸಲಾದ ಬಾಂಬ್‌ ಸ್ಫೋಟಗೊಂಡ ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ಅವರು ತಮ್ಮ ಕಚೇರಿಗೆ ಹೊರಡುತ್ತಿದ್ದಾಗ ಸ್ಫೋಟ ಸಂಭವಿಸಿದ್ದು, ಜತೆಯಲ್ಲಿದ್ದ ಅವರ ಸಹಾಯಕನೂ ಮೃತಪಟ್ಟಿದ್ದಾರೆ. ’ನಮ್ಮ ಗುಪ್ತಚರ ಅಧಿಕಾರಿಗಳು ಈ ದಾಳಿ ನಡೆಸಿದರು’ ಎಂದು ಉಕ್ರೇನ್‌ನ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಮೃತ ಲೆ.ಜ. ಇಗ್ರೊ ಕಿರಿಲೋವ್‌ ರಷ್ಯಾ ಸೇನೆಯ ಪರಮಾಣು, ಜೈವಿಕ ಮತ್ತು ರಾಸಾಯನಿಕ ಸಂರಕ್ಷಣಾ ಪಡೆಯ ಮುಖ್ಯಸ್ಥ ರಾಗಿದ್ದು, ಇವರ ಮೇಲೆ ಉಕ್ರೇನ್‌ ಕ್ರಿಮಿನಲ್‌ ಆರೋಪಗಳನ್ನು ಹೊರಿಸಿತ್ತು. ಇದರ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ಬ್ರಿಟನ್‌, ಕೆನಡಾ ಸೇರಿದಂತೆ ಹಲವು ದೇಶಗಳಿಂದ ನಿರ್ಬಂಧಕ್ಕೆ ಒಳಗಾಗಿರುವ ಕಿರಿಲೋವ್‌ರ ಮೇಲೆ ಯುದ್ಧದಲ್ಲಿ 4,800ಕ್ಕೂ ಅಧಿಕ ಬಾರಿ ನಿಷೇಧಿತ ರಾಸಾಯನಿಕ ಅಸ್ತ್ರಗಳನ್ನು ಬಳಸಿದ ಆರೋಪ ಹೊರಿಸಿದ್ದ ಉಕ್ರೇನ್‌, ಸೋಮವಾರವಷ್ಟೇ ತನಿಖೆ ಆರಂಭಿಸಿತ್ತು. ಆದರೆ ರಷ್ಯಾ ಈ ಆರೋಪವನ್ನು ಅಲ್ಲಗಳೆದಿತ್ತು.