ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲ :ಅಮೆರಿಕದಲ್ಲಿ ಭಾರತದ ಬಗ್ಗೆ ರಾಹುಲ್‌ ಅಪಪ್ರಚಾರ!

| Published : Sep 11 2024, 01:16 AM IST / Updated: Sep 11 2024, 04:18 AM IST

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲ :ಅಮೆರಿಕದಲ್ಲಿ ಭಾರತದ ಬಗ್ಗೆ ರಾಹುಲ್‌ ಅಪಪ್ರಚಾರ!
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕದ ಕೆಲವು ಸಂಘಟನೆಗಳು ವರ್ಷ ವರ್ಷ ಸಲ್ಲದ ಆರೋಪ ಮಾಡುತ್ತಿರುವ ನಡುವೆಯೇ, ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲ’ ಎಂಬ ಗಂಭೀರ ಆರೋಪ ಮಾಡಿದ್ದಾರೆ 

ವಾಷಿಂಗ್ಟನ್‌: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕದ ಕೆಲವು ಸಂಘಟನೆಗಳು ವರ್ಷ ವರ್ಷ ಸಲ್ಲದ ಆರೋಪ ಮಾಡುತ್ತಿರುವ ನಡುವೆಯೇ, ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲ’ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಅವರು ‘ಸಿಖ್‌ ಸಮುದಾಯಕ್ಕೆ ಪೇಟ ಧರಿಸಲು ಅವಕಾಶ ನೀಡುತ್ತಿಲ್ಲ’ ಎಂದು ಉದಾಹರಣೆ ನೀಡಿದ್ದಾರೆ.

ರಾಹುಲ್‌ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಆರ್‌.ಪಿ. ಸಿಂಗ್‌ ಹಾಗೂ ಕೇಂದ್ರ ಸಚಿವ ಹರ್ದೀಪ್‌ ಪುರಿ, ‘1984ರಲ್ಲಿ ಸಿಖ್‌ ಹತ್ಯಾಕಾಂಡ ನಡೆಸಿದ ಕಾಂಗ್ರೆಸ್‌ ಪಕ್ಷವೇ ಇದೀಗ ಓಲೈಕೆ ರಾಜಕಾರಣಕ್ಕಾಗಿ ಇಂಥ ಮಾತುಗಳನ್ನು ಆಡುತ್ತಿದೆ. ರಾಹುಲ್‌ಗೆ ಧೈರ್ಯವಿದ್ದರೆ ಭಾರತಕ್ಕೆ ಬಂದು ಈ ಮಾತುಗಳನ್ನು ಪುನರುಚ್ಚರಿಸಲಿ. ಅವರನ್ನು ನ್ಯಾಯಾಲಯದ ಮೆಟ್ಟಿಲೇರಿಸುತ್ತೇವೆ’ ಎಂದು ಸವಾಲು ಹಾಕಿದ್ದಾರೆ.

ವರ್ಜೀನಿಯಾದ ಹೆರ್ನ್‌ಡಾನ್‌ನಲ್ಲಿ ಸಿಖ್‌ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಹುಲ್‌, ‘ಭಾರತದಲ್ಲೀಗ ಯುದ್ಧ ನಡೆಯುತ್ತಿರುವುದು ಸಿಖ್ಖರಿಗೆ ಪೇಟ ಧರಿಸಲು ಅವಕಾಶ ನೀಡಬೇಕೋ? ಬೇಡವೋ? ಎಂಬುದರ ಬಗ್ಗೆ. ಸಿಖ್ಖರಿಗೆ ಕಡಾ ಧರಿಸಲು ಅವಕಾಶ ನೀಡಬೇಕೋ? ಬೇಡವೋ? ಎಂಬುದರ ಬಗ್ಗೆ. ಇಂಥದ್ದರ ಬಗ್ಗೆಯೇ ಇದೀಗ ಭಾರತದಲ್ಲಿ ಯುದ್ಧ ನಡೆಯುತ್ತಿದೆ. ಜೊತೆಗೆ ಇದು ಕೇವಲ ಸಿಖ್ಖರಿಗೆ ಮಾತ್ರ ಸಂಬಂಧಪಟ್ಟಿಲ್ಲ. ಬದಲಾಗಿ ಎಲ್ಲಾ ಧರ್ಮೀಯರಿಗೂ ಹೀಗೆ ಧಾರ್ಮಿಕ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದೆ’ ಎಂದಿದ್ದಾರೆ.

ಬಿಜೆಪಿ ತಿರುಗೇಟು: ಇನ್ನು ಕೇಂದ್ರ ಸಚಿವ ಹರ್‌ದೀಪ್‌ ಸಿಂಗ್ ಪುರಿ ಮಾತನಾಡಿ ‘ನಾನು 6 ದಶಕಗಳಿಂದ ಹೆಮ್ಮೆಯಿಂದ ಪೇಟ ಧರಿಸುತ್ತಿದ್ದೇನೆ. ಅದಕ್ಕಿಂತ ಹೆಚ್ಚಿನ ಸಮಯದಿಂದ ಕಡ ಧರಿಸುತ್ತಿದ್ದೇನೆ. ನಮ್ಮ ಸರ್ಕಾರ ಸಿಖ್‌ ಸಮುದಾಯದ ಇತರೆ ಸಮಸ್ಯೆಗಳನ್ನೂ ಬಗೆಹರಿಸಿದೆ. ಸಿಖ್‌ ಸಮುದಾಯ ಹಿಂದೆಂದಿಗಿಂತ ಈಗ ಹೆಚ್ಚು ಸುರಕ್ಷಿತ ಭಾವನೆಯಲ್ಲಿದೆ’ ಎಂದು ಹೇಳಿದ್ದಾರೆ.ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಮಾತನಾಡಿ, ‘ಸಿಖ್‌ ಹತ್ಯಾಕಾಂಡ ಇತಿಹಾಸದ ಹೊಂದಿರುವ ಕಾಂಗ್ರೆಸ್‌ ಇಂದು ನಮಗೆ ನೀತಿಪಾಠ ಮಾಡುತ್ತಿದೆ. 99 ಸೀಟು ಗೆಲ್ಲಲಾದವರು 400 ಸೀಟು ಗೆಲ್ಲುವ ಮಾತುಗಳನ್ನು ಮಾಡುತ್ತಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.

ಧೈರ್ಯ ಇದ್ದರೆ ಭಾರತಕ್ಕೆ ಬಂದು ಈ ಮಾತು ಹೇಳಿ: ರಾಹುಲ್‌ಗೆ ಬಿಜೆಪಿ ಸವಾಲ್‌ ರಾಹುಲ್‌ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್‌.ಪಿ.ಸಿಂಗ್‌, ‘1984ರಲ್ಲಿ 3000ಕ್ಕೂ ಹೆಚ್ಚು ಸಿಖ್ಖರ ಪೇಟ ಕಿತ್ತೆಸೆದು, ಅವರ ಗಡ್ಡ ಬೋಳಿಸಿ ಅವರನ್ನು ಹತ್ಯೆ ಮಾಡಲಾಯಿತು. ಆದರೆ ತಮ್ಮದೇ ಸರ್ಕಾರದ ಅವಧಿಯ ಇತಿಹಾಸದ ಈ ಪುಟಗಳ ಬಗ್ಗೆ ರಾಹುಲ್‌ ಪ್ರಸ್ತಾಪ ಮಾಡಲಿಲ್ಲ. ನಿಮಗೆ ಧೈರ್ಯವಿದ್ದರೆ ಇದೇ ಮಾತುಗಳನ್ನು ಭಾರತದಲ್ಲಿ ಬಂದು ಪುನರುಚ್ಚಾರ ಮಾಡಿ. ನಾನು ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿ ಕೋರ್ಟ್‌ ಮೆಟ್ಟಿಲೇರಿಸುತ್ತೇನೆ’ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿ ಬಯಸಿದಂತೆ ಆಯೋಗದಿಂದ ಲೋಕ ಚುನಾವಣೆ: ರಾಹುಲ್‌!

 ವಾಷಿಂಗ್ಟನ್‌ವಿದೇಶಿ ನೆಲದಲ್ಲಿ ನಿಂತು ಭಾರತದ ಆಂತರಿಕ ವಿಷಯಗಳ ಬಗ್ಗೆ ಹೇಳಿಕೆ ಮುಂದುವರೆಸಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯೇ ನ್ಯಾಯಸಮ್ಮತವಾಗಿರಲಿಲ್ಲ’ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಜತೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಚುನಾವಣಾ ಆಯೋಗವೂ ಬಿಜೆಪಿಗೆ ನೆರವಾಗುವಂತೆ ಚುನಾವಣಾ ಪ್ರಕ್ರಿಯೆ ನಡೆಸಿತು’ ಎಂಬ ಗುರುತರ ಆರೋಪ ಹೊರಿಸಿದ್ದಾರೆ.

ಅಮೆರಿಕದ ಪ್ರತಿಷ್ಠಿತ ಜಾರ್ಜ್‌ಟೌನ್‌ ವಿವಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ‘ಇತ್ತೀಚೆಗೆ ಮುಗಿದ ಲೋಕಸಭಾ ಚುನಾವಣೆಯಲ್ಲಿ ಎಲ್ಲರಿಗೂ ಸಮಾನ ವೇದಿಕೆ ಕಲ್ಪಿಸಿರಲಿಲ್ಲ. ಚುನಾವಣೆ ನ್ಯಾಯಸಮ್ಮತವಾಗಿದ್ದು ನನಗೆ ಕಂಡುಬರಲಿಲ್ಲ. ನನ್ನ ದೃಷ್ಟಿಯಲ್ಲಿ ಇದೊಂದು ಸಂಪೂರ್ಣ ನಿಯಂತ್ರಿತ ಪ್ರಕ್ರಿಯೆಯಾಗಿತ್ತು. ಬಿಜೆಪಿ ಹಣಕಾಸಿನ ಬಹುದೊಡ್ಡ ಲಾಭ ಸಿಕ್ಕಿತ್ತು. ಒಂದು ವೇಳೆ ನ್ಯಾಯಸಮ್ಮತ ಚುನಾವಣೆ ನಡೆದಿದ್ದರೆ ಬಿಜೆಪಿ 240 ಸ್ಥಾನ ಗೆಲ್ಲುವುದೂ ಕಷ್ಟವಿತ್ತು’ ಎಂದರು.‘ಬಿಜೆಪಿ ಬಯಸಿದ್ದನ್ನೇ ಚುನಾವಣಾ ಆಯೋಗ ಮಾಡಿತು. ಇಡೀ ಚುನಾವಣಾ ಪ್ರಕ್ರಿಯೆಯನ್ನು ಪ್ರಧಾನಿ ನರೇಂದ್ರ ಮೋದಿ, ವಿವಿಧ ರಾಜ್ಯಗಳಲ್ಲಿ ತಮ್ಮ ವಿವಿಧ ರಾಜಕೀಯ ಅಜೆಂಡಾ ಹರಡಲು ಅನುಕೂಲ ಮಾಡಿಕೊಡುವ ರೀತಿಯಲ್ಲಿ ರೂಪಿಸಲಾಗಿತ್ತು. ನಮ್ಮ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಿದ ಸ್ಥಿತಿಯಲ್ಲಿ ನಾವು ಚುನಾವಣೆ ಎದುರಿಸಬೇಕಾಯಿತು’ ಎಂದು ಆರೋಪಿಸಿದರು.

ಮೆಟ್ಟಿನಿಂತ ನಮ್ಮ ಮೈತ್ರಿಕೂಟ:

ಇದೇ ವೇಳೆ, ‘ನಮ್ಮ ಮೈತ್ರಿಕೂಟ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೋದಿ ಚಿಂತನೆಯನ್ನು ಸಂಪೂರ್ಣ ನಾಶ ಮಾಡಿತು. ಅವರ ಅಧಿಕಾರವನ್ನು ಪಾತಾಳಕ್ಕೆ ತಳ್ಳಿತು. ‘ನಾನು ದೇವರೊಂದಿಗೆ ಮಾತನಾಡುತ್ತೇನೆ‘ ಎಂಬ ಮಾತುಗಳೇ ಅವರು (ಮೋದಿ) ಮಾನಸಿಕವಾಗಿ ಎಷ್ಟು ಕುಗ್ಗಿಹೋಗಿದ್ದಾರೆ ಎಂಬುದಕ್ಕೆ ಮತ್ತು ನಾವು ಅವರನ್ನು ಹೇಗೆ ಜರ್ಜರಿತ ಮಾಡಿದ್ದೇವೆ ಎಂಬುದಕ್ಕೆ ಉದಾಹರಣೆ. ಅವರೀಗ ಸಂಪೂರ್ಣ ಜಾಲದಲ್ಲಿ ಸಿಲುಕಿದ್ದಾರೆ. ಅವರನ್ನು ಸಂಸತ್‌ನಲ್ಲಿ ನೋಡಿದಾಗ ಅವರು ಹೇಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂಬುದು ನಿಮಗೆ ಅರಿವಾಗುತ್ತದೆ. ಇದೆಲ್ಲಾ ಹೇಗೆ ಆಯಿತು ಎಂಬುದು ಅವರಿಗೂ ಅರ್ಥವಾಗದು’ ಎಂದು ರಾಹುಲ್‌ ವ್ಯಂಗ್ಯವಾಡಿದರು.