ಸಾರಾಂಶ
ಕ್ಯಾಲಿಫೋರ್ನಿಯಾ: ಅಮೆರಿಕದ ಪ್ರಸಿದ್ಧ ಕಾಫಿಹೌಸ್ ಬ್ರ್ಯಾಂಡ್ ಆಗಿರುವ ಸ್ಟಾರ್‌ಬಕ್ಸ್ ಸಿಇಒ ಆಗಿ ಬ್ರಿಯಾನ್ ನಿಕ್ಕೋಲ್ ಅವರು ನೇಮಕವಾಗಿದ್ದಾರೆ. ಅವರು ಮುಂದಿನ ತಿಂಗಳಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ಕಚೇರಿಗೆ ಪ್ರತಿ ದಿನ 1600 ಕಿ.ಮೀ. ದೂರ ಪ್ರಯಾಣ ಮಾಡಿ ಆಗಮಿಸಲಿದ್ದಾರೆ!
ಸ್ಟಾರ್‌ಬಕ್ಸ್‌ನ ಕೇಂದ್ರ ಕಚೇರಿ ಸಿಯಾಟಲ್‌ನಲ್ಲಿದೆ. ನಿಕೋಲ್ ಅವರ ಮನೆ ಸಿಯಾಟಲ್‌ನಿಂದ 1600 ಕಿ.ಮೀ. ದೂರದಲ್ಲಿರುವ ಕ್ಯಾಲಿಫೋರ್ನಿಯಾದಲ್ಲಿದೆ. ಹೀಗಾಗಿ ಅಲ್ಲಿಂದ ಕಚೇರಿಗೆ ಬರಲು ಕಂಪನಿ ಹೊಂದಿರುವ ವಿಮಾನವನ್ನು ತಮಗೆ ಒದಗಿಸಬೇಕು ಎಂದು ನಿಕ್ಕೋಲ್ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಕಂಪನಿ ಕೂಡ ಅಸ್ತು ಎಂದಿದೆ.
50 ವರ್ಷದ ನಿಕ್ಕೋಲ್ ಅವರಿಗೆ ಸ್ಟಾರ್‌ಬಕ್ಸ್ ಕಂಪನಿ ಭರ್ಜರಿ ವೇತನ ಆಫರ್ ಕೂಡ ನೀಡಿದೆ. ಪ್ರತಿ ವರ್ಷ ನಿಕ್ಕೋಲ್ ಅವರಿಗೆ ವೇತನ ರೂಪದಲ್ಲಿ 13.42 ಕೋಟಿ ರು. ಲಭಿಸಲಿದೆ. ಇದರ ಜತೆಗೆ ಅವರ ಕಾರ್ಯನಿರ್ವಹಣೆ ಆಧರಿಸಿ 30ರಿಂದ 60 ಕೋಟಿ ರು.ವರೆಗೂ ನಗದು ಬೋನಸ್ ದೊರೆಯಲಿದೆ. ಜತೆಗೆ 193 ಕೋಟಿ ರು. ಮೌಲ್ಯದ ವಾರ್ಷಿಕ ಷೇರುಗಳಿಗೆ ಅವರು ಅರ್ಹರಾಗಿದ್ದಾರೆ.
ಏಕೆ ಇಷ್ಟೊಂದು ಸೌಲಭ್ಯ?:
ಸ್ಟಾರ್‌ಬಕ್ಸ್‌ನ ವಹಿವಾಟಿನಲ್ಲಿ ಕುಸಿತ ಕಂಡುಬಂದಿದೆ. ಅಮೆರಿಕ ಹಾಗೂ ಚೀನಾ ದೇಶಗಳು ಸ್ಟಾರ್‌ಬಕ್ಸ್‌ನ ಅತಿದೊಡ್ಡ ಮಾರುಕಟ್ಟೆಯಾಗಿವೆ. ಆದರೆ ಭಾರತೀಯ ಮೂಲದ ಹಾಲಿ ಸಿಇಒ ಲಕ್ಷ್ಮಣ್ ನರಸಿಂಹನ್ ಅವರ ಅವಧಿಯಲ್ಲಿ ವ್ಯಾಪಾರ ಕುಸಿತ ಕಂಡಿದೆ. ನಿಕ್ಕೋಲ್ ಅವರು ನಷ್ಟದಲ್ಲಿರುವ ಕಂಪನಿಯನ್ನೂ ಲಾಭಕ್ಕೆ ತರುವ ಕೆಲಸದಿಂದ ಖ್ಯಾತಿ ಹೊಂದಿದ್ದಾರೆ.
ಇದಕ್ಕೂ ಮುನ್ನ 2018ರಲ್ಲಿ ಮೆಕ್ಸಿಕೋ ಮೂಲದ ಫಾಸ್ಟ್‌ಫುಡ್ ಸರಣಿ ಕಂಪನಿ ಚಿಪೋಟ್ಲೆ ಸಿಇಒ ಆಗುವಾಗಲೂ ಕ್ಯಾಲಿಫೋರ್ನಿಯಾದಿಂದಲೇ ಡೆನ್ವೆರ್‌ಗೆ ಬಂದು ಹೋಗುವುದಾಗಿ ಅವರು ಹೇಳಿದ್ದರು. ಚಿಪೋಟ್ಲೆ ಕಂಪನಿ ತನ್ನ ಕೇಂದ್ರ ಕಚೇರಿಯನ್ನು ನಿಕ್ಕೋಲ್ ಅವರು ಸಿಇಒ ಆದ ಮೂರೇ ತಿಂಗಳಿಗೆ ಕ್ಯಾಲಿಫೋರ್ನಿಯಾಕ್ಕೆ ಸ್ಥಳಾಂತರ ಮಾಡಿತ್ತು. ನಿಕ್ಕೋಲ್ ಅವರು ಸಿಇಒ ಆಗಿದ್ದ ಅವಧಿಯಲ್ಲಿ ಕಂಪನಿಯ ಷೇರುಗಳು ಶೇ.773ರಷ್ಟು ಏರಿಕೆಯಾಗಿದ್ದವು!