71ರ ರೀತಿ ಮತ್ತೆ ಪಾಕ್‌ ವಿಭಜನೆ: ತಾಲಿಬಾನ್‌ ಸಚಿವನ ಎಚ್ಚರಿಕೆ!

| Published : Feb 21 2024, 02:01 AM IST

71ರ ರೀತಿ ಮತ್ತೆ ಪಾಕ್‌ ವಿಭಜನೆ: ತಾಲಿಬಾನ್‌ ಸಚಿವನ ಎಚ್ಚರಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನದಲ್ಲಿ 1971 ಯುದ್ಧದ ಮರುಸೃಷ್ಟಿಯಾಗಲಿದೆ ಎಂದು ತಾಲಿಬಾನ್‌ ವಿದೇಶಾಂಗ ಸಚಿವ ಎಚ್ಚರಿಕೆ ನೀಡಿದ್ದಾನೆ.

ಇಸ್ಲಾಮಾಬಾದ್‌: ಉಭಯ ದೇಶಗಳ ನಡುವಿನ ದುರಾಂಡ್‌ ರೇಖೆ ಪ್ರದೇಶದಲ್ಲಿ ವಾಸಿಸುತ್ತಿರುವ ಪಶ್ತೂನಿಗಳನ್ನು ಪಾಕಿಸ್ತಾನ ಸರ್ಕಾರ ತೆರವು ಮಾಡಲು ಯತ್ನಿಸಿದರೆ 1971ರಲ್ಲಿ ವಿಜಭನೆ ಕಂಡಂತೆ ಮತ್ತೊಮ್ಮೆ ಪಾಕಿಸ್ತಾನ ವಿಭಜನೆಯಾಗಲಿದೆ ಎಂದು ಆಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ ಎಚ್ಚರಿಸಿದೆ. ಇದರೊಂದಿಗೆ ಪಾಕಿಸ್ತಾನವೇ ಸಾಕಿ ಬೆಳೆಸಿದ್ದ ತಾಲಿಬಾನ್‌ ಉಗ್ರರು ಇದೀಗ ಆ ದೇಶದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಫ್ಘನ್‌ ಸರ್ಕಾರದ ವಿದೇಶಾಂಗ ಖಾತೆ ಉಪಸಚಿವ ಅಬ್ಬಾಸ್‌ ಸ್ಟಾನಿಕ್‌ಝಾಯ್‌ ‘ಪಾಕ್ ಸರ್ಕಾರ ದುರಾಂಡ್‌ ರೇಖೆಯ ಬಳಿ ಪಶ್ತೂನಿಗಳನ್ನು ಆಫ್ಘಾನಿಸ್ತಾನದ ಒಳಪ್ರದೇಶಗಳಿಗೆ ಹೋಗುವಂತೆ ಬೆದರಿಕೆ ಹಾಕುತ್ತಿದೆ. ಇದನ್ನು ನಾವು ಒಪ್ಪಲ್ಲ. ಇದು ಹೀಗೆಯೇ ಮುಂದುವರೆದರೆ 1971ರಲ್ಲಿ ಬಾಂಗ್ಲಾದೇಶ ಉಗಮಕ್ಕೆ ಕಾರಣವಾದ ರೀತಿಯಲ್ಲೇ ಪಾಕ್‌ ಮತ್ತೊಮ್ಮೆ ವಿಭಜನೆಯಾಗಲಿದೆ’ ಎಂದು ಎಚ್ಚರಿಸಿದ್ದಾನೆ.

ವಿವಾದ ಏನು: ಪಾಕ್‌ ಮತ್ತು ಆಫ್ಘಾನ್‌ ನಡುವಣ ದುರಾಂಡ್‌ ಪ್ರದೇಶದಲ್ಲಿ ಗಡಿಯನ್ನು ಬ್ರಿಟಿಷರು ಗುರುತಿಸಿದ್ದಾರೆ. ಆದರೆ ಇದನ್ನು ಆಫ್ಘಾನಿಸ್ತಾನ ಒಪ್ಪಿಲ್ಲ. ಮತ್ತೊಂದೆಡೆ ಪಾಕ್‌ ಅದನ್ನೇ ಗಡಿ ರೇಖೆ ಎಂದು ವಾದಿಸುತ್ತಿದೆ. ಮತ್ತು ದುರಾಂಡ್‌ ರೇಖೆಯಿಂದ ತನ್ನ ಕಡೆ ವಾಸಿಸುತ್ತಿರುವ ಭಾರೀ ಪ್ರಮಾಣದ ಪಶ್ತೂನಿಗಳಿಗೆ ಜಾಗ ತೊರೆಯುವಂತೆ ಬೆದರಿಕೆ ಹಾಕುತ್ತಿದೆ.