ಗಡಿಯಲ್ಲಿರುವ ಹಿಂದೂ ದೇವಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ನಡುವೆ ದಶಕಗಳಿಂದ ನಡೆಯುತ್ತಿರುವ ತಿಕ್ಕಾಟ ಇದೀಗ ಸಂಘರ್ಷದ ರೂಪ ಪಡೆದುಕೊಂಡಿದೆ. ಗುರುವಾರ ಆರಂಭವಾದ ಎರಡೂ ದೇಶಗಳ ನಡುವಿನ ವೈಮಾನಿಕ ಯುದ್ಧದಲ್ಲಿ ಕನಿಷ್ಠ 11 ನಾಗರಿಕರು ಮೃತಪಟ್ಟಿದ್ದಾರೆ.

ಬ್ಯಾಂಕಾಕ್‌: ಗಡಿಯಲ್ಲಿರುವ ಹಿಂದೂ ದೇವಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ನಡುವೆ ದಶಕಗಳಿಂದ ನಡೆಯುತ್ತಿರುವ ತಿಕ್ಕಾಟ ಇದೀಗ ಸಂಘರ್ಷದ ರೂಪ ಪಡೆದುಕೊಂಡಿದೆ. ಗುರುವಾರ ಆರಂಭವಾದ ಎರಡೂ ದೇಶಗಳ ನಡುವಿನ ವೈಮಾನಿಕ ಯುದ್ಧದಲ್ಲಿ ಕನಿಷ್ಠ 11 ನಾಗರಿಕರು ಮೃತಪಟ್ಟಿದ್ದಾರೆ.

ಕಾಂಬೋಡಿಯಾ ಶೆಲ್‌, ಗುಂಡಿನ ದಾಳಿ ನಡೆಸಿದರೆ, ಥಾಯ್ಲೆಂಡ್‌ ಸೇನೆ ಎಫ್‌-16 ಯುದ್ಧವಿಮಾನ ಬಳಸಿ ನೆರೆಯ ದೇಶದ ಸೇನಾ ನೆಲೆಗಳ ಮೇಲೆ ಬಾಂಬ್‌ ದಾಳಿ ನಡೆಸಿದೆ. ಮೇ ತಿಂಗಳಲ್ಲಿ ಎರಡೂ ದೇಶಗಳ ನಡುವಿನ ಸೇನಾ ತಿಕ್ಕಾಟದಲ್ಲಿ ಕಾಂಬೋಡಿಯಾದ ಯೋಧನೊಬ್ಬ ಮೃತಪಟ್ಟಿದ್ದ. ಆ ಬಳಿಕ ಇದೀಗ ಗುರುವಾರ ಮುಂಜಾನೆ ದಿಢೀರ್‌ ಪ್ರಸಾತ್‌ ತಾ ಮುಹೇನ್‌ ಥೋಮ್‌ ದೇಗುಲದ ಸಮೀಪ ಎರಡೂ ದೇಶದ ಯೋಧರ ಮಧ್ಯೆ ಪರಸ್ಪರ ಗುಂಡಿನ ಚಕಮಕಿ ಆರಂಭವಾಗಿದ್ದು, ಬಳಿಕ ಅದು ಇತರೆಡೆ ವಿಸ್ತರಣೆಯಾಯಿತು.

ಯುದ್ಧ ಯಾಕೆ?:

ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ದಕ್ಷಿಣ ಪೂರ್ವ ಏಷ್ಯಾದಲ್ಲಿರುವ ನೆರೆಹೊರೆಯ ದೇಶಗಳಾಗಿದ್ದು, ಇವುಗಳ ಗಡಿಯಲ್ಲಿರುವ ಡಾಂಗ್ರೆಕ್‌ ಬೆಟ್ಟದಲ್ಲಿರುವ ಪುರಾತನ ಐತಿಹಾಸಿಕ ದೇವಸ್ಥಾನಗಳ ವಿಚಾರವಾಗಿ ಹಿಂದಿನಿಂದಲೂ ವಿವಾದ ನಡೆದುಕೊಂಡೇ ಬಂದಿದೆ. ಪ್ರಸಾತ್‌ ತಾ ಮುಹೇನ್‌ ಥೋಮ್‌ ಮಂದಿರ ಎಂದು ಕರೆಯಲಾಗಿರುವ ದೇಗುಲದ ಮೇಲೆ ಕಾಂಬೋಡಿಯಾದ ಅಧಿಕಾರವನ್ನು ಥಾಯ್ಲೆಂಡ್‌ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದೆ. 9ನೇ ಶತಮಾನದಲ್ಲಿ ಕಾಂಬೋಡಿಯಾವನ್ನು ಆಳುತ್ತಿದ್ದ ಖುಮೇರ್‌ ರಾಜ ವಂಶಸ್ಥ ರಾಜ ಉದಯಾದಿತ್ಯವರ್ಮನ್‌-2 ಈಶ್ವರನಿಗಾಗಿ ಈ ದೇಗುಲ ನಿರ್ಮಿಸಿದ್ದ ಎಂದು ಹೇಳಲಾಗಿದ್ದು, ಕಾಲಾನಂತರ ಇದು ಬೌದ್ಧರ ಆಡಳಿತಕ್ಕೊಳಪಟ್ಟಿತ್ತು. ಇದು ಯುನೆಸ್ಕೋದ ಪಾರಂಪರಿಕ ಪಟ್ಟಿಯಲ್ಲಿರುವ ದೇಗುಲವಾಗಿದೆ. ಈ ದೇಗುಲ ಅಂತಾರಾಷ್ಟ್ರೀಯ ಕೋರ್ಟಲ್ಲಿ ಕಾಂಬೋಡಿಯಾ ಪಾಲಾಗಿದೆ.

- 9ನೇ ಶತಮಾನದಲ್ಲಿ ಕಾಂಬೋಡಿಯಾವನ್ನು ಖಮೇರ್‌ ರಾಜವಂಶಸ್ಥ ಉದಯಾದಿತ್ಯ ವರ್ಮನ್‌ -2 ಆಳುತ್ತಿದ್ದ

- ಈಗಿನ ಕಾಂಬೋಡಿಯಾ - ಥಾಯ್ಲೆಂಡ್‌ ಗಡಿಯಲ್ಲಿರುವ ಡಾಂಗ್ರೆಕ್‌ ಬೆಟ್ಟದಲ್ಲಿ ಆತ ಈಶ್ವರ ದೇಗುಲ ಕಟ್ಟಿಸಿದ್ದ

- ಕಾಲಾನಂತರ ಈ ಸ್ಥಳ ಬೌದ್ಧರ ಆಳ್ವಿಕೆಗೆ ಒಳಪಟ್ಟಿತ್ತು. ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿರುವ ದೇಗುಲವಿದು

- ದೇಗುಲ, ಅದು ಇರುವ ಬೆಟ್ಟ ತಮಗೇ ಸೇರಬೇಕು ಎಂಬುದು ಎರಡೂ ದೇಶಗಳ ನಡುವೆ ತೀವ್ರ ಜಟಾಪಟಿಯ ವಿಷಯ

- ಇದೀಗ ಆ ಸ್ಥಳಕ್ಕಾಗಿ ಪರಿಸ್ಥಿತಿ ವಿಕೋಪಕ್ಕೆ. ಶೆಲ್‌ ಬಳಸಿ ಕಾಂಬೋಡಿಯಾ ದಾಳಿ. ಎಫ್-16 ಬಳಸಿದ ಥಾಯ್ಲೆಂಡ್‌