ಬ್ರಿಟಿಷ್‌ ವಸಾಹತು ಅವಧಿಯಲ್ಲಿ ಭಾರತವನ್ನು ವ್ಯವಸ್ಥಿತವಾಗಿ ಲೂಟಿ ಮಾಡಿದ್ದು ₹5000 ಲಕ್ಷ ಕೋಟಿ!

| Published : Jan 21 2025, 01:30 AM IST / Updated: Jan 21 2025, 04:06 AM IST

ಬ್ರಿಟಿಷ್‌ ವಸಾಹತು ಅವಧಿಯಲ್ಲಿ ಭಾರತವನ್ನು ವ್ಯವಸ್ಥಿತವಾಗಿ ಲೂಟಿ ಮಾಡಿದ್ದು ₹5000 ಲಕ್ಷ ಕೋಟಿ!
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟಿಷ್‌ ಭಾರತವನ್ನು ವ್ಯವಸ್ಥಿತವಾಗಿ ಲೂಟಿ ಮಾಡಲಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ವ್ಯಾಪಾರದ ಹೆಸರಲ್ಲಿ ಭಾರತಕ್ಕೆ ಕಾಲಿಟ್ಟ ಇಂಗ್ಲಿಷರು ಭಾರತದಿಂದ ಲೂಟಿ ಹೊಡೆದ ಸಂಪತ್ತಿನ ಮೌಲ್ಯ ಎಷ್ಟು ಗೊತ್ತಾ? ಇಂದಿನ ರುಪಾಯಿಯಲ್ಲಿ ಲೆಕ್ಕಹಾಕಿದರೆ 5 ಸಾವಿರ ಲಕ್ಷ ಕೋಟಿ ರುಪಾಯಿ!

 ದಾವೋಸ್‌ :  ಬ್ರಿಟಿಷ್‌ ವಸಾಹತು ಅವಧಿಯಲ್ಲಿ ಭಾರತವನ್ನು ವ್ಯವಸ್ಥಿತವಾಗಿ ಲೂಟಿ ಮಾಡಲಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ವ್ಯಾಪಾರದ ಹೆಸರಲ್ಲಿ ಭಾರತಕ್ಕೆ ಕಾಲಿಟ್ಟ ಇಂಗ್ಲಿಷರು ಭಾರತದಿಂದ ಲೂಟಿ ಹೊಡೆದ ಸಂಪತ್ತಿನ ಮೌಲ್ಯ ಎಷ್ಟು ಗೊತ್ತಾ? ಇಂದಿನ ರುಪಾಯಿಯಲ್ಲಿ ಲೆಕ್ಕಹಾಕಿದರೆ 5 ಸಾವಿರ ಲಕ್ಷ ಕೋಟಿ ರುಪಾಯಿ!

1765-1900ರ ನಡುವಿನ ವಸಾಹತುಶಾಹಿ ಅವಧಿಯಲ್ಲಿ ಭಾರತವೊಂದರಿಂದಲೇ 5,609 ಲಕ್ಷ ಕೋಟಿ ರು. ಅನ್ನು ಬ್ರಿಟನ್‌ ಲೂಟಿಹೊಡೆದಿದೆ. ಇದರಲ್ಲಿ 2,925 ಲಕ್ಷ ಕೋಟಿ ರು.ನಷ್ಟು ಸಂಪತ್ತು ಶೇ.10ರಷ್ಟಿದ್ದ ಬ್ರಿಟನ್‌ ಶ್ರೀಮಂತರ ಪಾಲಾಗಿದೆ ಎಂದು ‘ಆಕ್ಸ್‌ಫಾಮ್‌ ಇಂಟರ್‌ನ್ಯಾಷನ್‌’ ಸಂಸ್ಥೆಯ ವಿಶ್ವ ಅಸಮಾನತೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದಾವೋಸ್‌ನಲ್ಲಿ ಆರಂಭವಾಗಿರುವ ವಿಶ್ವ ಆರ್ಥಿಕ ಫೋರಂನ ಮೊದಲ ದಿನವಾದ ಸೋಮವಾರ ಬಿಡುಗಡೆ ಮಾಡಿದ ‘ಟೇಕರ್ಸ್‌ ನಾಟ್‌ ಮೇಕರ್ಸ್‌’ (ಪಡೆದವರು, ಸೃಷ್ಟಿಸಿದವರಲ್ಲ) ಎಂಬ ಹೆಸರಿನ ಈ ವರದಿಯು ಬಹುರಾಷ್ಟ್ರೀಯ ಕಾರ್ಪೋರೇಷನ್‌ಗಳು ವಸಹಾತುಶಾಹಿಯ ಸೃಷ್ಟಿ ಅಷ್ಟೆ. ವಸಹಾತುಶಾಹಿ ಕಾಲದಲ್ಲಿ ಯಾವ ರೀತಿ ಲೂಟಿ ನಡೆಯುತ್ತಿತ್ತೋ ಅಂಥದ್ದೇ ಲೂಟಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಮಾಡುತ್ತಿವೆ. ಸಂಪತ್ತು ಕೆಲವೇ ಕೆಲವರ ಕೈಯಲ್ಲಿ ಕ್ರೋಡೀಕರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.

ಕುಟುಂಬದಿಂದ ಕುಟುಂಬಕ್ಕೆ:

ವಿಶ್ವದ ಶೇ.60ರಷ್ಟು ಶತಕೋಟ್ಯಧೀಶರ ಸಂಪತ್ತಿಗೆ ಪಿತ್ರಾರ್ಜಿತ, ಏಕಸ್ವಾಮ್ಯ ಮತ್ತು ಬಂಡವಾಳಶಾಹಿ ಸಂಪರ್ಕಗಳೇ ಮೂಲ. 2034ರಲ್ಲಿ 4.5 ಲಕ್ಷ ಕೋಟಿ ರುಪಾಯಿ ಇವರಿಂದ ಮುಂದಿನ ತಲೆಮಾರಿಗೆ ಹಸ್ತಾಂತರವಾಗುತ್ತದೆ ಎಂದು ಅಂದಾಜಿಸಿರುವ ವರದಿ, ಈ ಮೂಲಕ ಸಂಪತ್ತು ಮುಂದೆಯೂ ಕೆಲವೇ ಕೆಲವರ ಕೈಯಲ್ಲಿ ಕ್ರೋಢೀಕರಣಗೊಳ್ಳುತ್ತದೆ ಎಂದು ಹೇಳಿದೆ.

ಶೇ.2ಕ್ಕೆ ಕುಸಿತ:

1750ರಲ್ಲಿ ಭಾರತ ಉಪಖಂಡವು ಅಂತಾರಾಷ್ಟ್ರೀಯ ಕೈಗಾರಿಕಾ ಉತ್ಪಾದನೆಯಲ್ಲಿ ಶೇ.25ರಷ್ಟು ಪಾಲು ಹೊಂದಿತ್ತು. ಅಂದರೆ ದೊಡ್ಡ ಪಾಲು ಭಾರತದ್ದೇ ಆಗಿತ್ತು. ಆದರೆ 1900ರಲ್ಲಿ ಇದು ಶೇ.2ಕ್ಕೆ ಕುಸಿಯಿತು. ಇದಕ್ಕೆ ಬ್ರಿಟಿಷರು ಏಷ್ಯಾದ ಜವಳಿ ಉದ್ಯಮದ ವಿಚಾರವಾಗಿ ಅನುಸರಿಸಿದ ನೀತಿಗಳೇ ಕಾರಣ ಎಂದು ಆಕ್ಸ್‌ಫಾಮ್‌ ತಿಳಿಸಿದೆ.

ಬಿಲಿಯನೇರ್‌ಗಳ ಸಂಪತ್ತು 3 ಪಟ್ಟು ಹೆಚ್ಚಳ

ದಾವೋಸ್‌: ವಿಶ್ವದಲ್ಲಿ ಬಿಲಿಯನೇರ್‌ಗಳ ಸಂಪತ್ತು ಹೆಚ್ಚಾಗುತ್ತಿದೆ. 2024 ವರ್ಷವೊಂದರಲ್ಲೇ ಬಿಲಿಯನೇರ್‌ಗಳ ಸಂಪತ್ತು 1.7 ಲಕ್ಷ ಕೋಟಿ ಲಕ್ಷದಷ್ಟು ಹೆಚ್ಚಾಗಿದೆ. ಅವರ ಒಟ್ಟಾರೆ ಸಂಪತ್ತು 13 ಲಕ್ಷ ಕೋಟಿಗೆ ತಲುಪಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅವರ ಸಂಪತ್ತು ಮೂರು ಪಟ್ಟು ವೇಗವಾಗಿ ಈ ಹೆಚ್ಚಳ ಆಗಿದೆ ಎಂದು ಆಕ್ಸ್‌ಫಾಮ್‌ ವರದಿ ತಿಳಿಸಿದೆ.

ಆಕ್ಸ್‌ಫಾಮ್‌ ಬಿಡುಗಡೆ ಮಾಡಿದ ವರದಿ ಪ್ರಸ್ತಾಪ

135 ವರ್ಷಗಳ ಅವಧಿಯಲ್ಲಿ ಭಾರೀ ಸಂಪತ್ತು ಲೂಟಿ

ವರದಿಯಲ್ಲಿ ಏನಿದೆ?

1765-1900ರ ಅವಧಿಯಲ್ಲಿ ಬ್ರಿಟೀಷರಿಂದ ಭಾರತದ 5,609 ಲಕ್ಷ ಕೋಟಿ ರು. ಸಂಪತ್ತು ಲೂಟಿ

ಲೂಟಿಯಾದ ಹಣದಲ್ಲಿ 2,925 ಲಕ್ಷ ಕೋಟಿ ರು.ನಷ್ಟು ಶೇ.10ರಷ್ಟು ಬ್ರಿಟನ್‌ ಶ್ರೀಮಂತರ ಪಾಲು

ವಸಾಹತುಶಾಹಿ ಆಡಳಿತ ಮಾಡುತ್ತಿದ್ದ ಲೂಟಿ ಈಗ ಬಹುರಾಷ್ಟ್ರೀಯ ಕಂಪನಿಗಳಿಂದ ನಡೆಯುತ್ತಿದೆ

ಜಾಗತಿಕ ಮಟ್ಟದಲ್ಲಿ ಸಂಪತ್ತು ಕೆಲವೇ ಕೆಲವರ ಕೈಯಲ್ಲಿ ಕ್ರೋಢೀಕರಣವಾಗುತ್ತಿದೆ: ಆಕ್ಸ್‌ಫಾಮ್‌