ಸಾರಾಂಶ
ಅಮೆರಿಕದ ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತನ್ನ ಎದುರಾಳಿ, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಮೇಲೆ ವೈಯುಕ್ತಿಕ ದಾಳಿ ಮುಂದುವರೆಸಿದ್ದಾರೆ.
ವಾಷಿಂಗ್ಟನ್: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳು ಸಮೀಪಿಸುತ್ತಿರುವ ಹೊತ್ತಲ್ಲಿಯೇ ಮಾತಿನ ಭರಾಟೆ ಜೋರಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತನ್ನ ಎದುರಾಳಿ, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಮೇಲೆ ವೈಯುಕ್ತಿಕ ದಾಳಿ ಮುಂದುವರೆಸಿದ್ದಾರೆ. ‘ ತಾನು ಹ್ಯಾರಿಸ್‌ಗಿಂತ ಉತ್ತಮವಾಗಿ ಕಾಣುತ್ತೇನೆ ’ ಎಂದು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಪೆನ್ಸಿಲ್ವೆನಿಯಾದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಕಮಲಾ ಹ್ಯಾರಿಸ್ ಆರ್ಥಿಕತೆ ನೀತಿಯನ್ನು ಟೀಕಿಸುವ ಭರದಲ್ಲಿ ಟ್ರಂಪ್ ನಾಲಿಗೆ ಹರಿ ಬಿಟ್ಟಿದ್ದಾರೆ. ‘ನಾನು ಆಕೆಗಿಂತ ಹೆಚ್ಚು ಉತ್ತಮವಾಗಿ ಕಾಣಿಸುತ್ತೇನೆ’ ಎಂದಿದ್ದರು. ಟೈಮ್ ಮ್ಯಾಗಝಿನ್ ನಲ್ಲಿ ಕಮಲಾ ಹ್ಯಾರಿಸ್ ರೇಖಾಚಿತ್ರ ಪ್ರಕಟಿಸಿ, ಅದಕ್ಕೆ ಉದಾರವಾದ ಎಂದು ಪ್ರಕಟಿಸಿದ ಬೆನ್ನಲ್ಲೇ, ಅದನ್ನು ಟೀಕಿಸುವ ಭರದಲ್ಲಿ ಟ್ರಂಪ್ ಈ ರೀತಿ ಹೇಳಿಕೆ ನೀಡಿದ್ದಾರೆ.
ಸಿಂಗಾಪುರ: ಇಸ್ಲಾಮಿಕ್ ನಾಯಕರ ಬೆಳೆಸಲು ಇಸ್ಲಾಮಿಕ್ ಕಾಲೇಜು
ಸಿಂಗಾಪುರ: ಬಹುಜನಾಂಗದ ಪ್ರಜೆಗಳು ನೆಲೆಸಿರುವ ಸಿಂಗಾಪುರದಲ್ಲಿ ಭವಿಷ್ಯದ ಇಸ್ಲಾಮಿಕ್ ನಾಯಕರನ್ನು ಬೆಳೆಸುವ ಉದ್ದೇಶದಿಂದ ಹೊಸ ಇಸ್ಲಾಮಿಕ್ ಕಾಲೇಜನ್ನು ಸ್ಥಾಪನೆ ಮಾಡುವುದಾಗಿ ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್ ಭಾನುವಾರ ಘೋಷಿಸಿದ್ದಾರೆ. ರಾಷ್ಟ್ರೀಯ ದಿನದ ಮೊದಲ ರ್‍ಯಾಲಿಯಲ್ಲಿ ಭಾಗಿಯಾಗಿದ್ದ ವಾಂಗ್ ಮುಸ್ಲಿಂ ಕಾಲೇಜು ಸ್ಥಾಪನೆ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಸ್ಟ್ರೈಟ್ಸ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಮೂಲಗಳ ಪ್ರಕಾರ, 8 ವರ್ಷಗಳಿಂದ ಈ ಕಾಲೇಜು ಕೆಲಸ ನಿರ್ವಹಿಸುತ್ತಿದ್ದು, ಇದೀಗ ಸಿಂಗಾಪುರ ಕಾಲೇಜ್ ಆಫ್ ಇಸ್ಲಾಮಿಕ್ ಸ್ಟಡೀಸ್ ಎಂದು ಕರೆಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಮಾಜಿ ಸಿಎಂ ಕರುಣಾನಿಧಿ ಜನ್ಮ ಶತಮಾನೋತ್ಸವ: ₹100ನ ನಾಣ್ಯ ಬಿಡುಗಡೆ
ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಕರುಣಾನಿಧಿ ಜನ್ಮಶತಮಾನೋತ್ಸವದ ಅಂಗವಾಗಿ ಭಾನುವಾರ 100 ರು. ಮೌಲ್ಯದ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲಾಯಿತು. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ನಾಣ್ಯ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಸೇರಿದಂತೆ ಡಿಎಂಕೆ ನಾಯಕರು ಉಪಸ್ಥಿತರಿದ್ದರು. ಕರುಣಾನಿಧಿ ಅವರು ಐದು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಐದು ದಶಕಗಳ ಕಾಲ ಡಿಎಂಕೆ ಪಕ್ಷವನ್ನು ಮುನ್ನಡೆಸಿದ್ದರು. 2018ರಲ್ಲಿ ಮೃತಪಟ್ಟಿದ್ದರು.
ಲಂಡನ್ ಹೋಟೆಲ್‌ನಲ್ಲಿ ಏರಿಂಡಿಯಾ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ
ಮುಂಬೈ: ಏರಿಂಡಿಯಾ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಮೇಲೆ ಲಂಡನ್ ಹೋಟೆಲ್‌ನಲ್ಲಿ ಹಲ್ಲೆ ನಡೆದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದ ಬಳಿಯ ಸ್ಟಾರ್ ಹೋಟೆಲ್‌ನಲ್ಲಿ ಮಹಿಳಾ ಸಿಬ್ಬಂದಿ ತಂಗಿದ್ದ ವೇಳೆ ಹೋಟೆಲ್‌ಗೆ ನುಗ್ಗಿದ್ದ ವ್ಯಕ್ತಿ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಯುತ್ತಿದ್ದಂತೆ ಮಹಿಳಾ ಸಿಬ್ಬಂದಿ ಕೂಗಿಕೊಂಡಿದ್ದಾರೆ.
ಈ ವೇಳೆ ಅಕ್ಕಪಕ್ಕದ ಕೊಠಡಿಗಳಲ್ಲಿ ತಂಗಿದ್ದವರು ಆಕೆಯನ್ನು ರಕ್ಷಿಸಿದ್ದು, ಹಲ್ಲೆ ನಡೆಸಿದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಮಹಿಳಾ ಸಿಬ್ಬಂದಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಆರೋಪಿಸಿದ್ದಾರೆ. ಈ ಕುರಿತು ಏರಿಂಡಿಯಾ ಪ್ರತಿಕ್ರಿಯಿಸಿದ್ದು, ‘ಆಕೆಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತೇವೆ. ಅಲ್ಲಿನ ಸ್ಥಳೀಯ ಪೊಲೀಸರ ಜೊತೆಯೂ ಈ ವಿಚಾರವಾಗಿ ಸಂಪರ್ಕದಲ್ಲಿದ್ದೇವೆ. ಸಿಬ್ಬಂದಿಯ ಸುರಕ್ಷತೆ ಮತ್ತು ರಕ್ಷಣೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದಿದೆ.