ಸಾರಾಂಶ
ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಸೋಮವಾರವಷ್ಟೇ ಅಧಿಕಾರ ವಹಿಸಿಕೊಂಡಿದ್ದ ‘ಭಾರತದ ಮಿತ್ರ’ ಡೊನಾಲ್ಡ್ ಟ್ರಂಪ್ ಮೊದಲೇ ದಿನವೇ ಭಾರತಕ್ಕೆ ಶಾಕ್ ನೀಡಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರು ಹಲವು ಕಾರ್ಯಾದೇಶಗಳಿಗೆ ಸಹಿ ಹಾಕಿದ್ದು, ಅದರಲ್ಲಿ ಭಾರತದ ಮೇಲೆ ನಕಾರಾತ್ಮಕ ಪರಿಣಾಮ ಹಲವು ಅಂಶಗಳಿವೆ.
ಇದರಲ್ಲಿ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚಿನ ಸುಂಕ ಹೇರುವ, ಜನ್ಮಸಿದ್ಧ ಪೌರತ್ವ ರದ್ದು ಮಾಡುವ ಮಹತ್ವದ ವಿಷಯಗಳಿವೆ.
ವಿದೇಶಗಳೊಂದಿಗೆ ನಡೆಸುವ ವಹಿವಾಟಿಗೆ ಭಾರತ ರುಪಾಯಿ ಮೂಲಕವೇ ಹಣ ಪಾವತಿ ಮಾಡುತ್ತಿರುವ ಮತ್ತು ಬ್ರಿಕ್ಸ್ ದೇಶಗಳು ಡಾಲರ್‌ಗೆ ಪರ್ಯಾಯವಾಗಿ ತಮ್ಮದೇ ಹೊಸ ಕರೆನ್ಸಿ ಆರಂಭಿಸುವ ಕುರಿತು ಚರ್ಚಿಸುತ್ತಿರುವ ಹೊತ್ತಿನಲ್ಲೇ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.ಭಾರತದ ವಸ್ತುಗಳಿಗೆ ಶೇ.100 ತೆರಿಗೆ?:
‘ಭಾರತ ಸೇರಿದಂತೆ ಬ್ರಿಕ್ಸ್ ರಾಷ್ಟ್ರಗಳಿಗೆ ಶೇ 100ರಷ್ಟು ಸುಂಕ ವಿಧಿಸಬಹುದು. ಏಕೆಂದರೆ ಆ ದೇಶಗಳು ಅಮೆರಿಕದ ವಸ್ತುಗಳಿಗೆ ಭಾರಿ ತೆರಿಗೆ ಹಾಕುತ್ತಿವೆ. ಮುಂದೆ ನಾವೂ ಇದನ್ನೇ ಮಾಡಬೇಕಾದೀತು’ ಎಂದು ಟ್ರಂಪ್ ಹೇಳಿದರು.
ಈ ಕ್ರಮವು ವಾಷಿಂಗ್ಟನ್ ಮತ್ತು ನವದೆಹಲಿ ನಡುವಿನ ವ್ಯಾಪಾರ ಸಂಬಂಧಗಳ ಮೇಲೆ ಪ್ರಮುಖ ಪರಿಣಾಮ ಬೀರಬಹುದಾಗಿದೆ.
ಭಾರತವು ಅಮೆರಿಕದ ವಸ್ತುಗಳಿಗೆ ದುಪ್ಪಟ್ಟು ತೆರಿಗೆ ವಿಧಿಸುವುದನ್ನು ಹಿಂದೆಯೇ ಟ್ರಂಪ್ ವಿರೋಧಿಸಿದ್ದರು ಹಾಗೂ ಅಮೆರಿಕವೂ ಹೀಗೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಅಲ್ಲದೆ ಬ್ರಿಕ್ಸ್ ದೇಶಗಳು ಡಾಲರ್‌ಗೆ ಪರ್ಯಾಯ ಕರೆನ್ಸಿ ಆರಂಭಿಸುವುದನ್ನೂ ಅವರು ವಿರೋಧಿಸಿದ್ದರು. ಈಗ ಅದನ್ನೇ ಪುನರುಚ್ಚರಿಸಿದ್ದಾರೆ.
ಟ್ರಂಪ್‌ರ ಈ ಹೇಳಿಕೆಯಿಂದಲೇ ಭಾರತದ ಷೇರುಪೇಟೆ ಮಂಗಳವಾರ 1200 ಅಂಕದಷ್ಟು ಪತನಗೊಂಡಿದೆ.
ಜನ್ಮಸಿದ್ಧ ಪೌರತ್ವ ಹಕ್ಕು ರದ್ದು?:
ಮುಂದಿನ ದಿನಗಳಲ್ಲಿ ಜನ್ಮಸಿದ್ಧ ಪೌರತ್ವ ಹಕ್ಕು ರದ್ದುಗೊಳಿಸಲು ಕ್ರಮ ಜರುಗಿಸಲು ಯತ್ನಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕೇವಲ ತಮ್ಮ ಮಕ್ಕಳಿಗೆ ಅಮೆರಿಕ ಪೌರತ್ವ ಕೊಡಿಸಲೆಂದು, ವಿದೇಶಿಗರು ಅಮೆರಿಕದಲ್ಲಿ ಜನ್ಮ ನೀಡುವ ಪದ್ಧತಿ ಅನುಸರಿಸತೊಡಗಿದ್ದಾರೆ ಎಂಬ ಕಾರಣ ನೀಡಿ ಅವರು ಈ ಕ್ರಮದ ಇಂಗಿತ ವ್ಯಕ್ತಪಡಿಸಿದ್ದಾರೆ.
ಈ ಕ್ರಮ ಜರುಗಿಸಿದರೆ ಅಮೆರಿಕದಲ್ಲಿ ಕೆಲಸದಲ್ಲಿರುವ ಭಾರತೀಯರಿಗೆ ಆತಂಕ ಉಂಟಾಗುವುದು ಖಚಿತವಾಗಿದೆ. ಏಕೆಂದರೆ ಭಾರತೀಯ ದಂಪತಿಗಳಿಗೆ ಅಲ್ಲಿ ಮಗುವಾದರೆ ಆ ಮಗುವಿಗೆ ತನ್ನಿಂತಾನೇ ಅಮೆರಿಕ ಪೌರತ್ವ ಸಿಗದು. ಇದು ಭಾರತೀಯರಿಗೆ ಸಾಕಷ್ಟು ಸಮಸ್ಯೆ ತರುವ ವಿಷಯವಾಗಿದೆ. ಪೌರತ್ವಕ್ಕೆ ಹೊಸದಾಗಿ ಅರ್ಜಿ ಹಾಕಬೇಕಾಗಬಹುದು. ಅರ್ಜಿ ಮಂಜೂರಾಗುವವರೆಗೆ ಮಗುವನ್ನು ಅವರು ಭಾರತದಲ್ಲೇ ಬಿಟ್ಟು ಬರಬೇಕಾದ ಸ್ಥಿತಿ ಉಂಟಾಗಲಿದೆ.
ಅಮೆರಿಕದಲ್ಲಿ ಈಗ 54 ಲಕ್ಷ ಭಾರತೀಯರಿದ್ದಾರೆ. ಇವರಲ್ಲಿ ಶೇ.66ರಷ್ಟು ಜನ ವಲಸಿಗರಾಗಿದ್ದಾರೆ. ಶೇ.34 ಜನ ಮಾತ್ರ ಅಮೆರಿಕ ನಾಗರಿಕರಾಗಿದ್ದಾರೆ.
ಭಾರತದ ವಸ್ತುಗಳ ಶೇ.100ರಷ್ಟು ತೆರಿಗೆ ಎಚ್ಚರಿಕೆಡಾಲರ್‌ಗೆ ಪರ್ಯಾಯ ಕರೆನ್ಸಿ ವಿರುದ್ಧವೂ ಆಕ್ಷೇಪ
ಸೆನ್ಸೆಕ್ಸ್‌ಗೆ ಟ್ರಂಪ್ ಶಾಕ್: 1235 ಅಂಕಗಳ ಕುಸಿತ
ಮುಂಬೈ: ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸೆನ್ಸೆಕ್ಸ್ ಮಂಗಳವಾರ 1,235 ಅಂಕ ಕುಸಿದು 75838 ಅಂಕದಲ್ಲಿ ಕೊನೆಗೊಂಡಿತು. ಇದು 7 ತಿಂಗಳ ಕನಿಷ್ಠ ಮಟ್ಟವಾಗಿದೆ. ಪರಿಣಾಮ ಹೂಡಿಕೆದಾರರ ಸಂಪತ್ತು 7.5 ಲಕ್ಷ ಕೋಟಿ ರು.ನಷ್ಟು ಕರಗಿದೆ.==ರುಪಾಯಿ ಮೌಲ್ಯ 18 ಪೈಸೆ ಕುಸಿದು 86.58ಕ್ಕಿಳಿಕೆ
ಮುಂಬೈ: ಮಂಗಳವಾರ ಡಾಲರ್ ಎದುರು ರುಪಾಯಿ ಮೌಲ್ಯ 18 ಪೈಸೆಯಷ್ಟು ಭಾರೀ ಕುಸಿತ ಕಂಡು 86.58ರಲ್ಲಿ ಅಂತ್ಯವಾಗಿದೆ. ಟ್ರಂಪ್ ಅಧಿಕಾರಕ್ಕೇರಿದ ಬಳಿಕ ಡಾಲರ್‌ಗೆ ಭಾರೀ ಬೇಡಿಕೆ ಕಂಡುಬಂದಿದ್ದು ಇದಕ್ಕೆ ಕಾರಣವಾಯ್ತು.