ಸಾರಾಂಶ
ಶಿಕಾಗೋ/ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ಈ ಬಾರಿಯ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ (78) ಅವರ ಮೇಲೆ ಭೀಕರ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡು ಅವರ ಬಲಗಿವಿಯ ಮೇಲ್ತುದಿಯನ್ನು ಸೀಳಿಕೊಂಡು ಹೋಗಿದೆ. ಅವರ ಮೇಲೆ ಗುಂಡು ಹಾರಿಸಿದ 20 ವರ್ಷದ ಯುವಕ ಪೊಲೀಸ್ ಗುಂಡಿಗೆ ಬಲಿಯಾಗಿದ್ದಾನೆ.
1981ರಲ್ಲಿ ಅಧ್ಯಕ್ಷ ರೊನಾಲ್ಡ್ ರೇಗನ್ ಮೇಲೆ ನಡೆದ ಹತ್ಯಾ ಯತ್ನದ ನಂತರದ ಮೊದಲ ಇಂಥ ಯತ್ನ ಇದಾಗಿದೆ. ಘಟನೆಯು ಅಮೆರಿಕದಲ್ಲಿ ಸಂಚಲನ ಮೂಡಿಸಿದೆ. ಮಾಜಿ ಅಧ್ಯಕ್ಷರ ಹತ್ಯೆ ಯತ್ನಕ್ಕೆ ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗಿದೆ.
ಶನಿವಾರ ಸಂಜೆ ಪೆನ್ಸಿಲ್ವೇನಿಯಾ ರಾಜ್ಯದ ಬಟ್ಲರ್ ಟೌನ್ ಎಂಬಲ್ಲಿ ಎತ್ತರದ ವೇದಿಕೆಯ ಮೇಲೆ ನಿಂತು ಬಹಿರಂಗ ಪ್ರಚಾರ ಭಾಷಣ ಮಾಡುತ್ತಿದ್ದಾಗ ಟ್ರಂಪ್ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ ನಡೆದಿದೆ. ಟ್ರಂಪ್ ತಮ್ಮ ಕೈಯಲ್ಲಿ ನಕ್ಷೆಯೊಂದನ್ನು ಹಿಡಿದು ಹೇಗೆ ಅನ್ಯ ದೇಶದ ವಲಸಿಗರು ಅಮೆರಿಕಕ್ಕೆ ನುಸುಳುತ್ತಾರೆ ಎಂಬುದನ್ನು ವಿವರಿಸುತ್ತಿದ್ದರು. ಈ ವೇಳೆ ಕನಿಷ್ಠ 5 ಗುಂಡುಗಳು ಸಿಡಿದಿವೆ ಎಂದು ಹೇಳಲಾಗಿದೆ. ಕಿವಿಗೆ ಗುಂಡು ತಾಗುತ್ತಿದ್ದಂತೆ ಟ್ರಂಪ್ ತಮ್ಮ ಕೈಯಿಂದ ಕಿವಿ ಮುಚ್ಚಿಕೊಂಡಿದ್ದು ವಿಡಿಯೋದಲ್ಲಿ ಕಾಣಿಸಿದೆ. ಗುಂಡು ಹಾರುತ್ತಿದ್ದಂತೆ ಅವರ ಸುತ್ತ ಇದ್ದ ಜನರು ಜೋರಾಗಿ ಕಿರುಚಿಕೊಂಡಿದ್ದಾರೆ. ಯಾರೋ ಒಬ್ಬರು ‘ಬಗ್ಗಿ, ಬಗ್ಗಿ, ಬಗ್ಗಿ’ ಎಂದು ಕಿರುಚುತ್ತಾರೆ. ತಕ್ಷಣ ಸೀಕ್ರೆಟ್ ಸರ್ವೀಸ್ ಏಜೆಂಟರು ಟ್ರಂಪ್ ಅವರನ್ನು ಸುತ್ತುವರಿದು ರಕ್ಷಿಸುತ್ತಾರೆ. ಬಳಿಕ ಎದೆಗುಂದದೇ ಟ್ರಂಪ್ ಫೈಟ್ ಎಂದು ಕೈ ಎತ್ತಿ ಅಬ್ಬರಿಸುತ್ತಾರೆ.
ಬಳಿಕ ಟ್ರಂಪ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಈಗ ಟ್ರಂಪ್ ಅವರ ಸ್ಥಿತಿ ಸ್ಥಿರವಾಗಿದೆ. ಅವರು ಲವಲವಿಕೆಯಿಂದ ಇದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.
ಒಬ್ಬ ಸಾವು, ಇಬ್ಬರಿಗೆ ಗಾಯ:
ಹತ್ಯೆ ಯತ್ನದಿಂದ ಟ್ರಂಪ್ ಬಚಾವಾದರೂ ಹಂತಕ ಹಾರಿಸಿದ ಹಲವು ಗುಂಡುಗಳು ತಗುಲಿ ಒಬ್ಬ ನಾಗರಿಕ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡು ಹಾರಿಸಿದ ಯುವಕನನ್ನು ಬೆತೆಲ್ ಪಾರ್ಕ್‌ನ ಥಾಮಸ್ ಮ್ಯಾಥ್ಯೂ ಕ್ರುಕ್ಸ್ (20) ಎಂದು ಗುರುತಿಸಲಾಗಿದೆ. ಅವನನ್ನು ಸೀಕ್ರೆಟ್ ಸರ್ವೀಸ್ ಸಿಬ್ಬಂದಿ ಹತ್ಯೆಗೈದಿದ್ದಾರೆ. ಆತ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಮತದಾರ ಎಂದು ನೋಂದಾಯಿಸಿಕೊಂಡಿದ್ದು ಪತ್ತೆಯಾಗಿದೆ.
ಟ್ರಂಪ್ ಅವರನ್ನು ಹತ್ಯೆಗೈಯಲು ಹಂತಕನು 200ರಿಂದ 300 ಅಡಿ ದೂರದಲ್ಲಿರುವ ಎತ್ತರದ ಪ್ರದೇಶದಿಂದ ಎಆರ್-ಮಾದರಿಯ ರೈಫಲ್ ಬಳಸಿ ಹಲವು ಸುತ್ತು ಗುಂಡು ಹಾರಿಸಿದ್ದಾನೆ ಎಂದು ಭದ್ರತಾ ಪಡೆಗಳು ಹೇಳಿವೆ. ಎಫ್‌ಬಿಐ ಈ ಘಟನೆಯ ತನಿಖೆ ಆರಂಭಿಸಿದೆ.
ಡೊನಾಲ್ಡ್ ಟ್ರಂಪ್ ನವೆಂಬರ್ 5ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯೆಂದು ಅಧಿಕೃತವಾಗಿ ನಾಮನಿರ್ದೇಶನವನ್ನು ಸ್ವೀಕರಿಸುವುದಕ್ಕೆ ಎರಡು ದಿನ ಇರುವಾಗ ಈ ಗುಂಡಿನ ದಾಳಿ ನಡೆದಿರುವುದು ಗಮನಾರ್ಹವಾಗಿದೆ.---