ಭಾರತೀಯ ಟೆಕ್ಕಿ ನೇಮಕ ಬೇಡ: ಅಮೆರಿಕದ ಕಂಪನಿಗಳಿಗೆ ಟ್ರಂಪ್‌

| N/A | Published : Jul 25 2025, 08:02 AM IST

Donald Trump on tech hiring
ಭಾರತೀಯ ಟೆಕ್ಕಿ ನೇಮಕ ಬೇಡ: ಅಮೆರಿಕದ ಕಂಪನಿಗಳಿಗೆ ಟ್ರಂಪ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಅಮೆರಿಕ ಮೊದಲು’ ನೀತಿಯ ಬೆಂಬಲಿಗರಾಗಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಭಾರತೀಯರು ಸೇರಿದಂತೆ ವಿದೇಶಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಬದಲು ಆ ಅವಕಾಶವನ್ನು ಅಮೆರಿಕನ್ನರಿಗೆ ನೀಡುವಂತೆ ದೈತ್ಯ ಟೆಕ್‌ ಕಂಪನಿಗಳಾದ ಗೂಗಲ್‌, ಮೈಕ್ರೊಸಾಫ್ಟ್‌ಗೆ ಆದೇಶಿಸಿದ್ದಾರೆ.

 ವಾಷಿಂಗ್ಟನ್‌: ‘ಅಮೆರಿಕ ಮೊದಲು’ ನೀತಿಯ ಬೆಂಬಲಿಗರಾಗಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಭಾರತೀಯರು ಸೇರಿದಂತೆ ವಿದೇಶಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಬದಲು ಆ ಅವಕಾಶವನ್ನು ಅಮೆರಿಕನ್ನರಿಗೆ ನೀಡುವಂತೆ ದೈತ್ಯ ಟೆಕ್‌ ಕಂಪನಿಗಳಾದ ಗೂಗಲ್‌, ಮೈಕ್ರೊಸಾಫ್ಟ್‌ಗೆ ಆದೇಶಿಸಿದ್ದಾರೆ. ಈ ಮೂಲಕ ಭಾರತೀಯ ಟೆಕ್ಕಿಗಳಿಗೆ ಮಣೆ ಹಾಕುವುದನ್ನು ನಿಲ್ಲಿಸಿ ಎಂದು ಅಮೆರಿಕ ಮೂಲಕ ಜಾಗತಿಕ ಟೆಕ್ ದೈತ್ಯ ಕಂಪನಿಗಳಿಗೆ ಸೂಚಿಸಿದ್ದಾರೆ.

ಎಐ ಶೃಂಗಸಭೆಯಲ್ಲಿ ಮಾತನಾಡುತ್ತಾ ಟೆಕ್‌ ಕಂಪನಿಗಳ ಜಾಗತಿಕ ಮನಸ್ಥಿತಿ ಟೀಕಿಸಿರುವ ಟ್ರಂಪ್‌, ‘ಇದರಿಂದ ಅಮೆರಿಕನ್ನರನ್ನು ನಿರ್ಲಕ್ಷಿಸಲಾಗುತ್ತಿದೆ. ಅಮೆರಿಕದಲ್ಲಿ ಲಭಿಸುವ ಸ್ವಾತಂತ್ರ್ಯವನ್ನು ಬಳಕೆ ಮಾಡಿಕೊಂಡು, ಚೀನಾದಲ್ಲಿ ಕಂಪನಿ ಸ್ಥಾಪಿಸಿ, ಅದಕ್ಕೆ ಭಾರತೀಯನ್ನು ನೇಮಿಸಿಕೊಂಡು, ಐರ್ಲೆಂಡ್‌ನಲ್ಲಿ ಲಾಭವನ್ನು ಸಂಗ್ರಹಿಸಿಟ್ಟು, ದೇಶದ ಹೊರಗೆ ಹೂಡಿಕೆ ಮಾಡಲಾಗುತ್ತಿದೆ. ಇದು ಟ್ರಂಪ್‌ ಆಡಳಿತದಲ್ಲಿ ಅದು ನಡೆಯದು. ಎಐ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕೆ ದೇಶಭಕ್ತಿ ಮತ್ತು ರಾಷ್ಟ್ರೀಯ ನಿಷ್ಠೆಯ ಹೊಸ ಮನೋಭಾವ ಬೇಕಾಗುತ್ತದೆ’ ಎಂದು ಹೇಳಿದ್ದಾರೆ. ಜತೆಗೆ, ‘ಕಂಪನಿಗಳನ್ನು ಅಮೆರಿಕದಲ್ಲೇ ಸ್ಥಾಪಿಸಿ ಮತ್ತು ಇಲ್ಲಿನವರಿಗೇ ಉದ್ಯೋಗ ಒದಗಿಸಿ. ನಾವು ನಿಮ್ಮಿಂದ ಬಯಸುವುದಿಷ್ಟೇ’ ಎಂದು ಹೇಳಿದ್ದಾರೆ.

ಎಐ ಸಂಬಂಧಿತ ಆದೇಶಗಳಿಗೆ ಸಹಿ:

ಇದೇ ಶೃಂಗದಲ್ಲಿ ಟ್ರಂಪ್‌, ಎಐಗೆ ಸಂಬಂಧಿಸಿದ 3 ಆದೇಶಗಳಿಗೆ ಸಹಿ ಮಾಡಿದ್ದಾರೆ. ಮೊದಲನೆಯದು ಅಮೆರಿಕದವನ್ನು ಎಐ ನಾಯಕನನ್ನಾಗಿ ರೂಪಿಸುವ ಗುರಿ ಹೊಂದಿದ್ದು, ಕೃತಕಬುದ್ಧಿಮತ್ತೆಯ ಬೆಳವಣಿಗೆಯನ್ನು ಹೆಚ್ಚಿಸುವತ್ತ ಗಮನ ಹರಿಸುತ್ತದೆ. ಇದರಡಿಯಲ್ಲಿ, ಎಐಗೆ ಅಗತ್ಯವಾದ ಮೂಲಸೌಕರ್ಯವನ್ನು ನಿರ್ಮಿಸಲು ಕಂಪನಿಗಳಿಗೆ ಸುಲಭವಾಗಿಸಲು, ಡೇಟಾಸೆಂಟರ್‌ಗಳ ನಿರ್ಮಾಣಕ್ಕೆ ವೇಗ ನೀಡಲಾಗುತ್ತದೆ.

ಎರಡನೆಯದು, ಸರ್ಕಾರದಿಂದ ಫಂಡಿಂಗ್‌ ಪಡೆಯುವ ಕಂಪನಿಗಳಿಗೆ, ಯಾವುದೇ ಸಿದ್ಧಾಂತಗಳಿಂದ ಪ್ರಭಾವಿತವಾಗಿರದ, ರಾಜಕೀಯವಾಗಿ ತಟಸ್ಥ ಎಐ ಟೂಲ್‌ಗಳನ್ನು ಅಭಿವೃದ್ಧಿಪಡಿಸುವ ಕೆಲಸ ನೀಡಲಾಗುವುದು.

ಮೂರನೆಯ ಆದೇಶವು, ಅಮೇರಿಕನ್ ನಿರ್ಮಿತ ಎಐ ಟೂಲ್‌ಗಳ ರಫ್ತನ್ನು ಹೆಚ್ಚಿಸುವ ಮೂಲಕ ಜಾಗತಿಕವಾಗಿ ಸ್ಪರ್ಧಿಸಲು ಸಹಾಯ ಮಾಡುವತ್ತ ಗಮನಹರಿಸುತ್ತದೆ.

ಇದೇ ವೇಳೆ, ಎಐ ಅನ್ನು ಕೃತಕಬುದ್ಧಿಮತ್ತೆ ಎಂದು ಕರೆಯುವುದನ್ನೇ ವಿರೋಧಿಸಿರುವ ಟ್ರಂಪ್‌, ‘ಅದು ಕೃತಕವಲ್ಲ, ಮೇಧಾವಿ’ ಎಂದಿದ್ದಾರೆ.

Read more Articles on