ಸಾರಾಂಶ
ಅಮೆರಿಕದ ದಕ್ಷತೆ ಇಲಾಖೆಯ ಮುಖ್ಯಸ್ಥ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಭಾರತದಲ್ಲಿ ನೇಮಕಾತಿ ಆರಂಭಿಸಿದೆ ಹಾಗೂ ದೇಶದಲ್ಲಿ ಹೂಡಿಕೆ ಮಾಡಿ ತನ್ನ ಉತ್ಪಾದನಾ ಘಟಕವನ್ನೂ ಸ್ಥಾಪಿಸಲಿದೆ ಎಂಬ ವರದಿಗಳು ಬಂದ ಬೆನ್ನಲ್ಲೇ, ‘ಹೀಗೆ ಮಾಡುವುದು ಅನ್ಯಾಯ’ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಗುಡುಗಿದ್ದಾರೆ.
ವಾಷಿಂಗ್ಟನ್: ವಿಶ್ವದ ನಂ.1 ಶ್ರೀಮಂತ, ಅಮೆರಿಕದ ದಕ್ಷತೆ ಇಲಾಖೆಯ ಮುಖ್ಯಸ್ಥ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಭಾರತದಲ್ಲಿ ನೇಮಕಾತಿ ಆರಂಭಿಸಿದೆ ಹಾಗೂ ದೇಶದಲ್ಲಿ ಹೂಡಿಕೆ ಮಾಡಿ ತನ್ನ ಉತ್ಪಾದನಾ ಘಟಕವನ್ನೂ ಸ್ಥಾಪಿಸಲಿದೆ ಎಂಬ ವರದಿಗಳು ಬಂದ ಬೆನ್ನಲ್ಲೇ, ‘ಹೀಗೆ ಮಾಡುವುದು ಅನ್ಯಾಯ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.
ಮಸ್ಕ್ ಕೂಡ ಉಪಸ್ಥಿತರಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ‘ಎಲ್ಲಾ ದೇಶಗಳು ಅಮೆರಿಕದ ಮೇಲೆ ಅಧಿಕ ತೆರಿಗೆ ಹೇರುವ ಮೂಲಕ ನಮ್ಮ ಲಾಭ ಪಡೆಯುತ್ತಿವೆ. ಭಾರತದಲ್ಲಿ ಕಾರುಗಳನ್ನು ಮಾರುವುದು ಕಷ್ಟ. ಮಸ್ಕ್ ಭಾರತದಲ್ಲಿ ವಿಧಿಸಲಾಗುವ ತೆರಿಗೆಯಿಂದ ಬಚಾವಾಗಲು ಅಲ್ಲಿ ತಮ್ಮ ಉತ್ಪಾದನಾ ಘಟಕ ಆರಂಭಿಸಿದರೆ ಅದರಿಂದ ನಮಗೆ ಅನ್ಯಾಯವಾಗುತ್ತದೆ’ ಎಂದರು.
ತಮ್ಮ ಮೇಲೆ ಭಾರೀ ತೆರಿಗೆ ಹೇರುತ್ತಿರುವ ದೇಶಗಳಿಗೆ ಅದೇ ರೀತಿಯಲ್ಲಿ ತಿರುಗೇಟು ನೀಡುತ್ತಿರುವ ಟ್ರಂಪ್, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ, ‘ಭಾರತ ಅತಿ ಹೆಚ್ಚು ತೆರಿಗೆ ಹೇರುವ ರಾಷ್ಟ್ರ’ ಎಂದಿದ್ದರು ಹಾಗೂ ಭಾರತ ಹೇರುವಷ್ಟೇ ತೆರಿಗೆಯನ್ನು ಅವರ ಮೇಲೆ ಹಾಕುತ್ತೇವೆ ಎಂದಿದ್ದರು.