ಸಾರಾಂಶ
ವಾಷಿಂಗ್ಟನ್: ಇತ್ತೀಚಿನ ಅಧ್ಯಕ್ಷೀಯ ಚುನಾವಣೆಯ ವೆಚ್ಚದ ಸಂಬಂಧ ಸಂಕಷ್ಟದಲ್ಲಿರುವ ಎದುರಾಳಿ ಕಮಲಾ ಹ್ಯಾರಿಸ್‌ಗೆ ಹಣಕಾಸಿನ ನೆರವು ನೀಡುವಂತೆ ಕಮಲಾ ವಿರುದ್ಧ ಗೆಲುವು ಸಾಧಿಸಿದ, ಅಮೆರಿಕದ ಮುಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ಕಮಲಾ ಅಂದಾಜು 19000 ಕೋಟಿ ರು. ಸಂಗ್ರಹ ಮಾಡಿದ್ದರು. ಆದರೆ ಈಗಾಗಲೇ ಮಾಡಿರುವ ಪಾವತಿ ಮತ್ತು ಮಾಡಬೇಕಿರುವ ಪಾವತಿ ಗಮನಿಸಿದರೆ ಕಮಲಾ ಅವರು ಇನ್ನೂ 165 ಕೋಟಿ ರು. ಕೊರತೆ ಎದುರಿಸುತ್ತಿರುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ‘ಕಮಲಾ ಹ್ಯಾರಿಸ್‌ರ ಪ್ರಚಾರಕ್ಕಾಗಿ 20 ಮಿಲಿಯನ್ ಡಾಲರ್ ಸಾಲವಾಗಿರುವುದನ್ನು ನಂಬಲಾಗುತ್ತಿಲ್ಲ. ಈ ಸಂಕಷ್ಟದ ಸಮಯದಲ್ಲಿ ಅವರಿಗೆ ಸಹಾಯ ಮಾಡಬೇಕು. ನಮ್ಮ ಬಳಿ ಅಪಾರ ಹಣ ಉಳಿದಿದೆ. ಅಮೆರಿಕವನ್ನು ಮತ್ತೆ ಮಹಾನ್ ಮಾಡೋಣ’ ಎಂದು ಕರೆ ನೀಡಿದ್ದಾರೆ.
ಅಮೆರಿಕದ ಚುನಾವಣಾ ಆಯೋಗದ ವರದಿ ಪ್ರಕಾರ, ಹ್ಯಾರಿಸ್‌ರ ಪಕ್ಷ ಅಂದಾಜು 19000 ಕೋಟಿ ರು. ದೇಣಿಗೆ ಸಂಗ್ರಹಿಸಿದ್ದರೆ, ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ 15000 ಕೋಟಿ ರು. ಸಂಗ್ರಹಿಸಿತ್ತು. ವಿಶೇಷವೆಂದರೆ ಚುನಾವಣೆ ಗೆದ್ದ ಟ್ರಂಪ್ ಅವರ ಪಕ್ಷದ ಬಳಿ ಇನ್ನೂ ಹಣ ಉಳಿದಿದ್ದರೆ, ಚುನಾವಣೆ ಸೋತ ಕಮಲಾ ಅವರ ಪಕ್ಷದ ನಿಧಿಯಲ್ಲಿ ಹಣದ ಕೊರತೆ ಕಾಣಿಸಿಕೊಂಡಿದೆ.