ಸಾರಾಂಶ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಈ ಹಣವನ್ನು ಬಾಂಗ್ಲಾದೇಶಕ್ಕೆ ಅಮೆರಿಕ ನೀಡಿತ್ತು. ಭಾರತಕ್ಕಲ್ಲ’ ಎಂಬ ಭಾರತೀಯ ಮಾಧ್ಯಮ ವರದಿಗೆ ತಿರುಗೇಟು ನೀಡಿದ್ದಾರೆ.
ವಾಷಿಂಗ್ಟನ್/ನವದೆಹಲಿ : ‘ಭಾರತದಲ್ಲಿನ ಚುನಾವಣೆ ಮೇಲೆ ಪ್ರಭಾವ ಬೀರಿ ಅನ್ಯರನ್ನು (ವಿಪಕ್ಷಗಳನ್ನು) ಗೆಲ್ಲಿಸಲು ಹಿಂದಿನ ಜೋ ಬೈಡೆನ್ ಸರ್ಕಾರವು ಯುಎಸ್-ಏಡ್ ನೆಪದಲ್ಲಿ 180 ಕೋಟಿ ರು. ನೀಡಿತ್ತು’ ಎಂದು ಸ್ಫೋಟಕ ಆರೋಪ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಈ ಹಣವನ್ನು ಬಾಂಗ್ಲಾದೇಶಕ್ಕೆ ಅಮೆರಿಕ ನೀಡಿತ್ತು. ಭಾರತಕ್ಕಲ್ಲ’ ಎಂಬ ಭಾರತೀಯ ಮಾಧ್ಯಮ ವರದಿಗೆ ತಿರುಗೇಟು ನೀಡಿದ್ದಾರೆ. ‘180 ಕೋಟಿ ರು.ಗಳನ್ನು ಭಾರತಕ್ಕೆ ಹಾಗೂ 250 ಕೋಟಿ ರು.ಗಳನ್ನು ಬಾಂಗ್ಲಾದೇಶಕ್ಕೆ ಪ್ರತ್ಯೇಕವಾಗಿ ನೀಡಲಾಗಿತ್ತು’ ಎಂದಿದ್ದಾರೆ.
ಆದರೆ ತಮ್ಮ ಹೇಳಿಕೆಗೆ ಕೊಂಚ ತಿರುವು ನೀಡಿರುವ ಅವರು, ‘ನನ್ನ ಸ್ನೇಹಿತ ನರೇಂದ್ರ ಮೋದಿ ಅವರಿಗೆ ಮತದಾನ ವ್ಯವಸ್ಥೆ ಸುಧಾರಣೆಗೆ 180 ಕೋಟಿ ರು. ನೀಡಲಾಗಿತ್ತು’ ಎಂದು ಹೇಳಿದ್ದಾರೆ. ಮೋದಿ ಹೆಸರನ್ನು ಹೇಳಿರುವುದು ಭಾರತದಲ್ಲಿ ಸಂಚಲನ ಮೂಡಿಸಿದೆ ಹಾಗೂ ಕಾಂಗ್ರೆಸ್ ಪಕ್ಷ ಈ ವಿಚಾರ ಮುಂದಿಟ್ಟುಕೊಂಡು ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.
ಟ್ರಂಪ್ ಹೇಳಿದ್ದೇನು?:
ಯುಎಸ್-ಏಡ್ ಬಗ್ಗೆ 4ನೇ ಬಾರಿ ಶುಕ್ರವಾರ ಹೇಳಿಕೆ ನೀಡಿದ ಟ್ರಂಪ್, ‘ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತಕ್ಕೆ ಮತದಾನಕ್ಕಾಗಿ 180 ಕೋಟಿ ರು. ಹೋಗಿತ್ತು. ಭಾರತದಲ್ಲಿ ಮತದಾರರ ಮತದಾನಕ್ಕಾಗಿ ನಾವು ಅಷ್ಟು ಹಣ ನೀಡಿದರೆ ನಮ್ಮ ಪಾಡೇನು? ನಮ್ಮ ಮತದಾರರಿಗೂ ಉತ್ತೇಜನ ನೀಡುವ ಅಗತ್ಯವಿದೆ’ ಎಂದರು.
ಇನ್ನು ಬಾಂಗ್ಲಾದೇಶದ ಬಗ್ಗೆ ಪ್ರಸ್ತಾಪಿಸಿದ ಅವರು, ‘ಬಾಂಗ್ಲಾದೇಶದ ರಾಜಕೀಯ ವ್ಯವಸ್ಥೆ ಬಲಪಡಿಸಲು 250 ಕೋಟಿ ರು. ನೀಡಿದ್ದೆವು. ಆದರೆ ಅಲ್ಲಿ ಹಣ ಪಡೆದ ಸಂಸ್ಥೆ ಕೇವಲ ಇಬ್ಬರು ಸದಸ್ಯರನ್ನು ಹೊಂದಿತ್ತು’ ಎಂದರು.
‘ಭಾರತಕ್ಕೆ 2008ರ ನಂತರ ಚುನಾವಣಾ ಉದ್ದೇಶಕ್ಕೆ ಅಮೆರಿಕ ಹಣ ನೀಡಿರಲಿಲ್ಲ. ಬಾಂಗ್ಲಾದೇಶಕ್ಕೆ ಮಾತ್ರ ನೀಡಿತ್ತು’ ಎಂಬ ಭಾರತದ ಮಾಧ್ಯಮ ವರದಿಗೆ ಟ್ರಂಪ್ ಹೇಳಿಕೆ ವ್ಯತಿರಿಕ್ತವಾಗಿದೆ.
ಬಿಜೆಪಿ ಟೀಕೆ:
ಟ್ರಂಪ್ ಹೇಳಿಕೆ ಪ್ರಸ್ತಾಪಿಸಿರುವ ಬಿಜೆಪಿ ವಕ್ತಾರ ಅಮಿತ್ ಮಾಳವೀಯ, ‘ಟ್ರಂಪ್ ಅವರು ಚುನಾವಣಾ ಪ್ರಕ್ರಿಯೆಗಾಗಿ ಭಾರತಕ್ಕೆ ಬೇರೆ, ಬಾಂಗ್ಲಾಗೆ ಬೇರೆ ನಿಧಿ ನೀಡಿದ್ದಾಗಿ ಹೇಳಿದ್ದಾರೆ. ಟ್ರಂಪ್ ಅವರಿಗೆ ತಮ್ಮ ಖರ್ಚು ವೆಚ್ಚದ ಬಗ್ಗೆ ಗೊತ್ತಿರುವುದಿಲ್ಲವೆ? ಆದರೆ ಭಾರತ ಒಂದು ಮಾಧ್ಯಮ ಹಾಗೂ ಎಡಪಂಥೀಯರಿಗೆ ಟ್ರಂಪ್‌ಗಿಂತ ಅಮೆರಿಕದ ಖರ್ಚು ವೆಚ್ಚದ ಬಗ್ಗೆ ತಿಳಿದಂತಿದೆ’ ಎಂದಿದ್ದಾರೆ.
ಅಲ್ಲದೆ, ಈ ಹಣವನ್ನು ಕಿಕ್‌ಬ್ಯಾಕ್ ಎಂದು ಟ್ರಂಪ್ ಹೇಳಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ತಿರುಗೇಟು:
ಈ ನಡುವೆ ಮೋದಿ ಹೆಸರು ಪ್ರಸ್ತಾಪಿಸಿದ ಟ್ರಂಪ್, ‘ಮೋದಿಗೆ 180 ಕೋಟಿ ರು. ನೀಡಿದ್ದೆ’ ಎಂದು ಹೇಳಿರುವುದನ್ನು ಕಾಂಗ್ರೆಸ್ ಪಕ್ಷ ಅಸ್ತ್ರ ಮಾಡಿಕೊಂಡಿದೆ.
ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ‘ಭಾರತದಲ್ಲಿ ಮತದಾನವನ್ನು ಹೆಚ್ಚಿಸಲು ನಾನು ನನ್ನ ಸ್ನೇಹಿತ ನರೇಂದ್ರ ಮೋದಿಯವರಿಗೆ 180 ಕೋಟಿ ರು. ನೀಡಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಇಂದು ಹೇಳಿದ್ದಾರೆ. ಆದರೆ ಟ್ರಂಪ್ ಹೇಳಿಕೆಯ ನಂತರ, ಎಲ್ಲೆಡೆ ಮೌನ ಆವರಿಸಿದೆ. ಅದಕ್ಕಾಗಿಯೇ 180 ಕೋಟಿ ರು. ಎಲ್ಲಿಗೆ ಹೋಯಿತು ಎಂದು ನಾವು ನರೇಂದ್ರ ಮೋದಿಯವರಿಂದ ತಿಳಿದುಕೊಳ್ಳಲು ಬಯಸುತ್ತೇವೆ. ಏಕೆಂದರೆ ಟ್ರಂಪ್ ಅವರ ಹೇಳಿಕೆಯು ಚುನಾವಣೆಗಳ ಮೇಲೆ ಪ್ರಭಾವ ಬೀರಲು ಮತ್ತು ಮತದಾನವನ್ನು ಹೆಚ್ಚಿಸಲು ಮೋದಿಗೆ ಹಣ ನೀಡಿದ್ದನ್ನು ಸಾಬೀತುಪಡಿಸಿದೆ’ ಎಂದಿದ್ದಾರೆ.
‘ಆದರೆ ನರೇಂದ್ರ ಮೋದಿ ಎಷ್ಟೇ ವಿದೇಶಿ ನಿಧಿಯನ್ನು ತಂದರೂ, ಅವರು ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಸಾಧ್ಯವಾಗುವುದಿಲ್ಲ’ ಎಂದು ಅವರು ಕುಟುಕಿದ್ದಾರೆ.
- ನೆರವು ಹೋಗಿದ್ದು ಬಾಂಗ್ಲಾಕ್ಕೆ ಎಂಬ ವಾದ ತಿರಸ್ಕರಿಸಿದ ಅಧ್ಯಕ್ಷ- ನನ್ನ ಸ್ನೇಹಿತ ಮೋದಿಗೆ 180 ಕೋಟಿ ನೀಡಲಾಗಿತ್ತು ಎಂದು ಹೇಳಿಕೆ!
ಟ್ರಂಪ್ ಹೇಳಿದ್ದೇನು?
180 ಕೋಟಿ ರು.ಗಳನ್ನು ಭಾರತಕ್ಕೆ ಹಾಗೂ 250 ಕೋಟಿ ರು.ಗಳನ್ನು ಬಾಂಗ್ಲಾದೇಶಕ್ಕೆ ಪ್ರತ್ಯೇಕವಾಗಿ ನೀಡಲಾಗಿತ್ತು. ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತಕ್ಕೆ ಮತದಾನಕ್ಕಾಗಿ 180 ಕೋಟಿ ರು. ಹೋಗಿತ್ತು. ಭಾರತದಲ್ಲಿ ಮತದಾರರ ಮತದಾನಕ್ಕಾಗಿ ನಾವು ಅಷ್ಟು ಹಣ ನೀಡಿದರೆ ನಮ್ಮ ಪಾಡೇನು?
₹180 ಕೋಟಿ ಎಲ್ಲಿ ಹೋಯ್ತು ಮೋದಿ
ಭಾರತದಲ್ಲಿ ಮತದಾನವನ್ನು ಹೆಚ್ಚಿಸಲು ನಾನು ನನ್ನ ಸ್ನೇಹಿತ ನರೇಂದ್ರ ಮೋದಿಯವರಿಗೆ 180 ಕೋಟಿ ರು. ನೀಡಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಇಂದು ಹೇಳಿದ್ದಾರೆ. 180 ಕೋಟಿ ರು. ಎಲ್ಲಿಗೆ ಹೋಯಿತು ಎಂದು ಮೋದಿಯವರಿಂದ ತಿಳಿದುಕೊಳ್ಳಲು ಬಯಸುತ್ತೇವೆ.
- ಕಾಂಗ್ರೆಸ್
ಟ್ರಂಪ್ ಕಿಕ್‌ಬ್ಯಾಕ್ ಬಗ್ಗೆ ತನಿಖೆಯಾಗಲಿ
ಟ್ರಂಪ್ ಅವರು ಚುನಾವಣಾ ಪ್ರಕ್ರಿಯೆಗಾಗಿ ಭಾರತಕ್ಕೆ ಬೇರೆ, ಬಾಂಗ್ಲಾಗೆ ಬೇರೆ ನಿಧಿ ನೀಡಿದ್ದಾಗಿ ಹೇಳಿದ್ದಾರೆ. ಟ್ರಂಪ್ ಅವರಿಗೆ ತಮ್ಮ ಖರ್ಚು ವೆಚ್ಚದ ಬಗ್ಗೆ ಗೊತ್ತಿರುವುದಿಲ್ಲವೆ? ಈ ಹಣವನ್ನು ಕಿಕ್‌ಬ್ಯಾಕ್ ಎಂದು ಟ್ರಂಪ್ ಹೇಳಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಯಬೇಕು.
- ಬಿಜೆಪಿ--