ಇನ್ನೂ 487 ಭಾರತೀಯರ ಗಡೀಪಾರಿಗೆ ಅಂತಿಮ ಆದೇಶ ಹೊರಡಿಸಿದ ಅಮೆರಿಕ ಸರ್ಕಾರ : ಮಾಹಿತಿ ರವಾನೆ

| N/A | Published : Feb 08 2025, 01:45 AM IST / Updated: Feb 08 2025, 04:09 AM IST

ಸಾರಾಂಶ

ಬುಧವಾರವಷ್ಟೇ 104 ಅಕ್ರಮ ವಲಸಿಗರನ್ನು ಭಾರತಕ್ಕೆ ಗಡೀಪಾರು ಮಾಡಿದ್ದ ಅಮೆರಿಕ ಸರ್ಕಾರ, ಇದೀಗ ಇನ್ನೂ 487 ಭಾರತೀಯರ ಗಡೀಪಾರಿಗೆ ಅಂತಿಮ ಆದೇಶ ಹೊರಡಿಸಿದೆ.

ನವದೆಹಲಿ: ಬುಧವಾರವಷ್ಟೇ 104 ಅಕ್ರಮ ವಲಸಿಗರನ್ನು ಭಾರತಕ್ಕೆ ಗಡೀಪಾರು ಮಾಡಿದ್ದ ಅಮೆರಿಕ ಸರ್ಕಾರ, ಇದೀಗ ಇನ್ನೂ 487 ಭಾರತೀಯರ ಗಡೀಪಾರಿಗೆ ಅಂತಿಮ ಆದೇಶ ಹೊರಡಿಸಿದೆ.

ಈ ಕುರಿತು ಶುಕ್ರವಾರ ಮಾಹಿತಿ ನೀಡಿರುವ ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಂ ಮಿಸ್ರಿ, ‘ಭಾರತೀಯರು ಎನ್ನಲಾದ 487 ಜನರನ್ನು ಗಡೀಪಾರು ಮಾಡಲು ಈಗಾಗಲೇ ಅಮೆರಿಕ ಸರ್ಕಾರ ಅಂತಿಮ ಆದೇಶ ಹೊರಡಿಸಿದೆ. ಈ ಪೈಕಿ 298 ಜನರ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಂಡಿದೆ’ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಫೆ.12-13ರಂದು ಅಮೆರಿಕಕ್ಕೆ ಭೇಟಿ ನೀಡುತ್ತಿದ್ದು, ಅದಕ್ಕೂ ಮುನ್ನ ಈ ಎರಡನೇ ಹಂತದ ಗಡೀಪಾರಿನ ಪ್ರಕ್ರಿಯೆಗೆ ಅಮೆರಿಕ ಚಾಲನೆ ನೀಡಿದೆ.

ಈ ನಡುವೆ ಬುಧವಾರ 104 ಅಕ್ರಮ ವಲಸಿಗ ಭಾರತೀಯರ ಕೈಗೆ ಕೋಳ, ಕಾಲಿಗೆ ಸರಪಳಿ ಹಾಕಿದ ರೀತಿಯ ಬಗ್ಗೆ ಪ್ರತಿಕ್ರಿಯಿಸಿದ ಮಿಸ್ರಿ, ನಾವು ಅಮೆರಿಕದ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ. ಬೆಳವಣಿಗೆ ಕುರಿತು ನಮ್ಮ ಕಳವಳವನ್ನೂ ವ್ಯಕ್ತಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಜೊತೆಗೆ ಹಿಂದಿನ ಗಡೀಪಾರು ಪ್ರಕ್ರಿಯೆಗೆ ಹೋಲಿಸಿದರೆ ಬುಧವಾರ ನಡೆದ ಗಡೀಪಾರು ವಿಭಿನ್ನವಾಗಿತ್ತು. ಏಕೆಂದರೆ ಪ್ರಸಕ್ತ ಅಮೆರಿಕದಲ್ಲಿರುವ ವ್ಯವಸ್ಥೆಯೇ ಬೇರೆ ರೀತಿ ಇದೆ. ಅಕ್ರಮ ವಲಸೆಯನ್ನು ಅಮೆರಿಕ ರಾಷ್ಟ್ರೀಯ ಭದ್ರತಾ ಕಾರ್ಯಾಚರಣೆ ಎಂದು ಘೋಷಿಸಿದೆ. ಈ ಕಾರಣಕ್ಕಾಗಿಯೇ ವಲಸಿಗರ ಗಡೀಪಾರಿಗೆ ಸೇನಾ ವಿಮಾನ ಬಳಸಲಾಗಿತ್ತು. ಜೊತೆಗೆ ವಲಸಿಗರನ್ನು ತವರಿಗೆ ಕರೆತರಲು ಪರ್ಯಾಯ ಅವಕಾಶವೇನಾದರೂ ಇದೆಯೇ ಎಂಬುದರ ಬಗ್ಗೆಯೂ ನಾವು ಪರಿಶೀಲಿಸುತ್ತೇವೆ ಎಂದು ಮಿಸ್ರಿ ತಿಳಿಸಿದರು.

- ಅಂತಿಮ ಆದೇಶ ಹೊರಡಿಸಿ ಭಾರತಕ್ಕೆ ಮಾಹಿತಿ ರವಾನೆ

ಅಲ್ಲಿಂದಿಲ್ಲಿಗೆ- ಕೈಗೆ ಕೋಳ ಹಾಕಿದ್ದಕ್ಕೆ ಭಾರತ ಕಳವಳ

- 104 ಅಕ್ರಮ ವಲಸಿಗರನ್ನು ಬುಧವಾರವಷ್ಟೇ ಭಾರತಕ್ಕೆ ಕಳುಹಿಸಿದ್ದ ಅಮೆರಿಕ- ಅಪರೂಪಕ್ಕೆ ಮಿಲಿಟರಿ ವಿಮಾನ ಬಳಕೆ. ಎಲ್ಲರ ಕೈಗೆ ಕೋಳ ಹಾಕಿದ್ದು ವಿವಾದ- ಇದರ ಬೆನ್ನಲ್ಲೇ 487 ಭಾರತೀಯರ ಗಡೀಪಾರಿಗೆ ಅಮೆರಿಕ ಅಂತಿಮ ಆದೇಶ- 298 ಭಾರತೀಯರ ಮಾಹಿತಿ ಕೇಂದ್ರ ಸರ್ಕಾರಕ್ಕೆ ರವಾನೆ: ವಿದೇಶಾಂಗ ಇಲಾಖೆ- ವಲಸಿಗರನ್ನು ಕರೆತರಲು ಪರ್ಯಾಯ ಅವಕಾಶಗಳ ಬಗ್ಗೆ ಸರ್ಕಾರದ ಚಿಂತನೆ