ಸಾರಾಂಶ
ನವದೆಹಲಿ: ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮೇಲೆ ನಡೆದಿರುವ ಹಲ್ಲೆ ಘಟನೆಯನ್ನ ಪ್ರಧಾನಿ ಮೋದಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಖಂಡಿಸಿದ್ದಾರೆ.
ಟ್ರಂಪ್ ಹತ್ಯೆ ಯತ್ನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತ ಪಡಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ‘ನನ್ನ ಸ್ನೇಹಿತ, ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮೇಲಿನ ದಾಳಿಯಿಂದ ತೀವ್ರ ಕಳವಳಗೊಂಡಿದ್ದೇನೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಹಿಂಸೆಗೆ ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ. ಅವರು ಶೀಘ್ರ ಚೇತರಿಕೆಗೆ ಆಶಿಸುತ್ತೇನೆ’ ಎಂದು ಹೇಳಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಈ ಘಟನೆಗೆ ಖಂಡಿಸಿ, ‘ಟ್ರಂಪ್ ಮೇಲೆ ನಡೆದಿರುವ ಹಲ್ಲೆಯಿಂದ ನಾನು ತೀವ್ರ ಕಳವಳಗೊಂಡಿದ್ದೇನೆ. ಇಂತಹ ಕೃತ್ಯಗಳನ್ನು ಸಾಧ್ಯವಾದಷ್ಟು ಪ್ರಬಲವಾಗಿ ಖಂಡಿಸಬೇಕು’ ಎಂದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ರಂಪ್ ಹತ್ಯೆ ಯತ್ನಕ್ಕೆ ಪ್ರತಿಕ್ರಿಯಿಸಿದ್ದು,‘ಟ್ರಂಪ್ ಹತ್ಯೆ ಯತ್ನದಿಂದ ದಿಗ್ಭ್ರಮೆಯಾಗಿದೆ. ಈ ಹೇಯ ಕೃತ್ಯವನ್ನು ಬಲವಾಗಿ ಖಂಡಿಸುತ್ತೇನೆ. ಈ ರೀತಿಯ ಹಿಂಸೆಗೆ ಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜದಲ್ಲಿ ಯಾವುದೇ ರೀತಿ ಸ್ಥಾನವಿಲ್ಲ. ಭಾರತ ಅಮೆರಿಕದ ಪ್ರಜೆಗಳ ಪರವಾಗಿ ನಿಂತಿದೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಲಿದ್ದೇವೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶ್ವಾದ್ಯಂತ ಎಡಪಂಥೀಯರಿಂದ ಬಲಪಂಥೀಯರ ಮೇಲೆ ದಾಳಿ:
ಅಸ್ಸಾಂ ಸಿಎಂ
ಗುವಾಹಟಿ: ಹತ್ಯೆ ಯತ್ನಕ್ಕೆ ಒಳಗಾಗಿರುವ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬೆಂಬಲ ಸೂಚಿಸಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ, ವಿಶ್ವದಾದ್ಯಂತ ಎಡಪಂಥೀಯರಿಂದ ಬಲಪಂಥೀಯರ ಮೇಲೆ ದಾಳಿ ನಡೆಯುತ್ತಿವೆ ಎಂದು ಹೇಳಿದ್ದಾರೆ.ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಪ್ರಪಂಚದಾದ್ಯಂತ ಬಲಪಂಥೀಯ ನಾಯಕರ ಮೇಲೆ ಎಡಪಂಥೀಯರಿಂದ ದೈಹಿಕ ಹಾಗೂ ಅನ್ಯ ರೀತಿಗಳಲ್ಲಿ ನಿರಂತರ ದಾಳಿಗಳು ನಡೆಯುತ್ತಿವೆ. ಇದು ದೇಶ ಮೊದಲು ಎಂಬ ಸಿದ್ಧಾಂತವನ್ನು ಸೋಲಿಸುವುದಿಲ್ಲ. ಧೃಡವಾಗಿರುವ ಡೊನಾಲ್ಡ್ ಟ್ರಂಪ್‌ಗೆ ನನ್ನ ಶುಭ ಹಾರೈಕೆಗಳು’ ಎಂದಿದ್ದಾರೆ.