ಸಾರಾಂಶ
ಲಂಡನ್: ಆನ್‌ಲೈನ್ ಗೇಮ್‌ಗಳ ದಾಸರಾಗಿ ಯುವಕ, ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳ ನಡುವೆಯೇ ಅಂತರ್ಜಾಲದ ಹೊಸ ಅವತಾರವಾದ ಮೆಟಾವರ್ಸ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಕಾಮುಕರ ಗುಂಪೊಂದು ಗ್ಯಾಂಗ್‌ರೇಪ್ ಮಾಡಿದ ಆಘಾತಕಾರಿ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.ವರ್ಚ್ಯುವಲಿ ನಡೆದ ಈ ಘಟನೆಯಿಂದ ಬಾಲಕಿ ಮೇಲೆ ದೈಹಿಕವಾಗಿ ಯಾವುದೇ ಅಪಾಯವಾಗದೇ ಇದ್ದರೂ, ದೈಹಿಕವಾಗಿ ನೊಂದ ಬಾಲಕಿಯರಷ್ಟೇ ಈಕೆ ಕೂಡಾ ಮಾನಸಿಕವಾಗಿ ಜರ್ಜರಿತವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಲ್ಲಿಕೆಯಾದ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಇಂಥ ಘಟನೆಗಳ ಕುರಿತು ತನಿಖೆ ನಡೆಸಲು ಹಾಲಿ ಕಾಯ್ದೆಗಳೇ ಇಲ್ಲದ ಕಾರಣ, ಈ ಪ್ರಕರಣ ಪೊಲೀಸರಿಗೆ ಸವಾಲಾಗಿಯೂ ಪರಿಣಮಿಸಿದೆ.
ಏನಿದು ಪ್ರಕರಣ?:
ಮೆಟಾವರ್ಸ್ ಎನ್ನುವುದೊಂದು ಆನ್‌ಲೈನ್ ಜಗತ್ತು. ಇಲ್ಲಿ ಹೆಡ್‌ಸೆಟ್ ಹಾಕಿಕೊಂಡರೆ, ಆತ ವರ್ಚ್ಯುವಲ್ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಸುತ್ತಾಡಬಹುದು. ಯಾರೊಂದಿಗೆ ಬೇಕಾದರೂ ಎದುರಿಗೆ ನಿಂತಂತೆ ವ್ಯವಹಾರ ನಡೆಸಬಹುದು. ಇಂಥದ್ದೇ ಮೆಟಾವರ್ಸ್‌ನ ಆಟವೊಂದರಲ್ಲಿ ಭಾಗಿಯಾಗಿದ್ದ ವೇಳೆ ಬಾಲಕಿ ಮೇಲೆ ಅದೇ ಆಟದಲ್ಲಿ ಭಾಗಿಯಾಗಿದ್ದ ತಂಡವೊಂದು ವರ್ಚ್ಯುವಲ್ ಆಗಿ ‘ಗ್ಯಾಂಗ್‌ರೇಪ್’ ಮಾಡಿದೆ. ಈ ಘಟನೆಯಿಂದ ಬಾಲಕಿ ಸಂಪೂರ್ಣವಾಗಿ ತಲ್ಲಣಿಸಿ ಹೋಗಿದ್ದು ದೈಹಿಕವಾಗಿ ಗ್ಯಾಂಗ್‌ರೇಪ್ ನಡೆದಷ್ಠೇ ಪ್ರಮಾಣದಲ್ಲಿ ಮಾನಸಿಕವಾಗಿ ನೊಂದಿದ್ದಾಳೆ. ಆಕೆಗೆ ಈ ಆಘಾತದಿಂದ ಹೊರಬರುವುದು ಸಾಧ್ಯವಾಗುತ್ತಿಲ್ಲ. ಬ್ರಿಟನ್‌ನಲ್ಲಿ ಇಂಥ ಪ್ರಕರಣ ಇದೇ ಮೊದಲು ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.ಬಾಲಕಿ ಮೆಟಾವರ್ಸ್‌ನಲ್ಲಿ ಯಾವ ಆಟ ಆಡುತ್ತಿದ್ದಳು ಎಂಬುದು ಬಹಿರಂಗವಾಗಿಲ್ಲ.