ಟೆಹ್ರಾನ್‌: ಮಧ್ಯಪ್ರಾಚ್ಯ ಸಂಘರ್ಷದ ವೇಳೆ ಹೋರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಸಂಚಾರ ತಡೆಯುವ ಉದ್ದೇಶದಿಂದ ತಾನೇ ಅಳವಡಿಸಿದ್ದ ಜಲಸ್ಫೋಟಕಗಳನ್ನು(ವಾಟರ್‌ ಮೈನ್ಸ್‌) ಪತ್ತೆಹಚ್ಚಲು ಸಾಧ್ಯವಾಗದ ಸ್ಥಿತಿಗೆ ಇದೀಗ ತಲುಪಿದೆ. ಇದೇ ಕಾರಣಕ್ಕೆ ಹೋರ್ಮುಜ್‌ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳಿಸಲು ಪರದಾಡುತ್ತಿದೆ.

ಇರಾನ್‌ನ ಈ ಕ್ರಮ ಪಾಕಿಸ್ತಾನದಲ್ಲಿ ನಡೆಯಲಿರುವ ಅಮೆರಿಕ ಜತೆಗಿನ ಶಾಂತಿ ಮಾತುಕತೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಅಮೆರಿಕವು ಆದಷ್ಟು ಶೀಘ್ರ ಹೋರ್ಮುಜ್‌ ಜಲಸಂಧಿಯನ್ನು ಮುಕ್ತಗೊಳಿಸುವಂತೆ ಇರಾನ್‌ ಮೇಲೆ ತೀವ್ರ ಒತ್ತಡ ಹಾಕುತ್ತಿದೆ.

ಕಳೆದ ತಿಂಗಳು ಸಣ್ಣ ಸಣ್ಣ ಬೋಟುಗಳನ್ನು ಬಳಸಿ ಹೋರ್ಮುಜ್‌ ಜಲಸಂಧಿಯಲ್ಲಿ ಭಾರೀ ಪ್ರಮಾಣದಲ್ಲಿ ಜಲ ಸ್ಫೋಟಕಗಳನ್ನು ಅಳವಡಿಸಿತ್ತು. ಆದರೆ, ಈ ಜಲಸ್ಫೋಟಕಗಳನ್ನು ಎಲ್ಲೆಲ್ಲಿ ಅಳವಡಿಸಲಾಗಿದೆ ಎಂಬ ಕುರಿತು ಇರಾನ್‌ ಸರಿಯಾದ ದಾಖಲೆ ಇಟ್ಟುಕೊಂಡಿದೆಯೇ, ಇಲ್ಲವೇ ಎಂಬುದು ಖಚಿತವಾಗಿಲ್ಲ.


ಜಲಸ್ಫೋಟಕಗಳು

ವರದಿಗಳ ಪ್ರಕಾರ ಕೆಲ ಜಲಸ್ಫೋಟಕಗಳು ಅವು ತನ್ನಿಂತಾಗಿಯೇ ಸ್ಥಳ ಬದಲಾಯಿಸುವ ರೀತಿಯಲ್ಲಿ ಅಳವಡಿಸಲಾಗಿತ್ತು. ಈಗ ಅವೇ ಇರಾನ್‌ ಪಾಲಿಗೆ ತಲೆನೋವು ತಂದಿಟ್ಟಿದೆ. ಈ ಸ್ಫೋಟಕಗಳನ್ನು ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳಿಗೆ ಅಪಾಯ ತಪ್ಪಿದ್ದಲ್ಲ ಎನ್ನುವಂತಾಗಿದೆ.

ಈ ವಾರದ ಆರಂಭದಲ್ಲಿ 2 ವಾರಗಳ ಕದನ ವಿರಾಮಕ್ಕೆ ಸಮ್ಮತಿಸಿದ್ದ ಇರಾನ್‌, ಹೋರ್ಮುಜ್‌ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಲು ಒಪ್ಪಿಕೊಂಡಿತ್ತು. ಆದರೆ, ಜಲಸ್ಫೋಟಕಗಳ ಕಾರಣದಿಂದಾಗಿ ಶನಿವಾರದ ವರೆಗೂ ಜಲಸಂಧಿಯನ್ನು ಎಲ್ಲಾ ಹಡಗುಗಳಿಗೆ ಮುಕ್ತಗೊಳಿಸುವಲ್ಲಿ ವಿಫಲವಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ. ಇದೇ ಕಾರಣಕ್ಕೆ ಹಡಗುಗಳ ಸಂಚಾರಕ್ಕೆ ಪ್ರತ್ಯೇಕ ಮಾರ್ಗವನ್ನೂ ಇರಾನ್‌ ಸೂಚಿಸಿದೆ.

ಇಲ್ಲಿಂದ ಶೇ.25 ತೈಲ ಸಾಗಣೆ:

ಹೋರ್ಮುಜ್‌ ಜಲಸಂಧಿಯು ಪರ್ಷಿಯಲ್‌ ಗಲ್ಫ್‌ ಮತ್ತು ಗಲ್ಫ್‌ ಆಫ್‌ ಒಮಾನ್‌ ಸಮುದ್ರವನ್ನು ಅರಬ್ಬೀ ಸಮುದ್ರದೊಂದಿಗೆ ಜೋಡಿಸುತ್ತದೆ. ವಿಶ್ವದ ಶೇ.25ರಷ್ಟು ತೈಲವು ಇದೇ ಜಲ ಮಾರ್ಗದ ಮೂಲಕ ಸಾಗಣೆಯಾಗುತ್ತದೆ. ಒಂದು ವೇಳೆ ಈ ಮಾರ್ಗ ಸಂಪೂರ್ಣವಾಗಿ ಹಡಗುಗಳ ಸಂಚಾರಕ್ಕೆ ಮುಕ್ತವಾಗದಿದ್ದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಮೇಲೆ ಗಂಭೀರ ಅಡ್ಡಪರಿಣಾಮ ಬೀರಲಿದೆ.