ಸಾರಾಂಶ
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಹತ್ಯೆ ಯತ್ನವನ್ನು ರಿಪಬ್ಲಿಕನ್ ಪಕ್ಷದ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ ಇದೊಂದು ಯೋಜಿತ ಸಂಚು ಎಂಬ ಗಂಭೀರ ಆರೋಪ ಮಾಡಿ, ಇದನ್ನು ನಾವು ಮರೆಯೋಲ್ಲ ಎಂದು ಹಾಲಿ ಅಧ್ಯಕ್ಷ ಜೋ ಬೈಡೆನ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ರಿಪಬ್ಲಿಕನ್ ಸಂಸದ ಮರ್ಜೋರಿ ಟೇಲರ್ ಗ್ರೀನೆ ಮಾತನಾಡಿ, ‘ಟ್ರಂಪ್‌ರನ್ನು ಗುರಿಯಾಗಿಸಿ ಎಂದು ಇತ್ತೀಚೆಗೆ ಬೈಡೆನ್ ಕರೆ ನೀಡಿದ ಬೆನ್ನಲ್ಲೇ ಅಂಥದ್ದೇ ಘಟನೆ ನಡೆದಿದೆ. ಇದಕ್ಕೂ ಮೊದಲು ಡೆಮಾಕ್ರೆಟ್ ಸಂಸದರು ಟ್ರಂಪ್‌ಗೆ ನೀಡಿದ್ದ ಸೀಕ್ರೆಟ್ ಸರ್ವೀಸ್ ರದ್ದು ಮಾಡುವ ಮಸೂದೆ ಮಂಡಿಸಿದ್ದರು.
ಇನ್ನೊಂದೆಡೆ ಅಮೆರಿಕದ ನ್ಯಾಯಾಂಗ ಇಲಾಖೆ ಟ್ರಂಪ್ ತಮ್ಮ ಉಳಿದ ಜೀವನವನ್ನು ಜೈಲಿನಲ್ಲಿ ಕಳೆಯಲು ಏನು ಬೇಕೋ ಆ ಪ್ರಯತ್ನಗಳನ್ನೆಲ್ಲಾ ಮಾಡಿತ್ತು. ಟ್ರಂಪ್ ಮತ್ತು ಅವರ ಬೆಂಬಲಿಗರ ಸಾವನ್ನು ಸರ್ಕಾರ ಬಯಸುತ್ತಿದೆ.
ಇಂದು ಏನೇನು ಆಯಿತೋ ಮತ್ತು ಇಂದು ಚೆಲ್ಲಿದ ರಕ್ತದ ಹನಿಗಳಿಗೆ ಡೆಮಾಕ್ರೆಟ್ ಪಕ್ಷ ಮತ್ತು ಮಾಧ್ಯಮಗಳೇ ಕಾರಣ’ ಎಂದು ಕಿಡಿಕಾರಿದ್ದಾರೆ.ಇನ್ನು ಟ್ರಂಪ್ ಜೊತೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇರುವ ಜೆ.ಡಿ.ವ್ಯಾನ್ಸ್ ಪ್ರತಿಕ್ರಿಯೆ ನೀಡಿ, ‘ಇದೊಂದು ಪ್ರತ್ಯೇಕ ಘಟನೆ ಅಲ್ಲ. ಜೋ ಬೈಡೆನ್‌ರ ಇಡೀ ಚುನಾವಣೆಯ ಸಾರಾಂಶವೇ ‘ಡೊನಾಲ್ಡ್ ಟ್ರಂಪ್ ಓರ್ವ ಸರ್ವಾಧಿಕಾರಿ, ಬಲಪಂಥೀಯ ಆಡಳಿತಗಾರ’ ಎಂಬುದಾಗಿತ್ತು. ಇಂಥ ಟೀಕೆಯೇ ಇಂಥ ದಾಳಿಗೆ ಕಾರಣ’ ಎಂದು ಕಿಡಿಕಾರಿದ್ದಾರೆ.