ಶ್ರೀಮಂತ ಭಾರತೀಯ ಕುಟುಂಬ ಅಮೆರಿಕದಲ್ಲಿ ಶವವಾಗಿ ಪತ್ತೆ!

| Published : Dec 31 2023, 01:30 AM IST / Updated: Dec 31 2023, 01:31 AM IST

ಸಾರಾಂಶ

ಅಮೆರಿಕದಲ್ಲಿ ವಾಸವಿದ್ದ ಶ್ರೀಮಂತ ಭಾರತೀಯ ಕುಟುಂಬವೊಂದು ಶವವಾಗಿ ಪತ್ತೆಯಾಗಿದೆ. ಈ ಕುಟುಂಬ 40 ಕೋಟಿ ರು. ಮೌಲ್ಯದ ಮನೆಯನ್ನು ಹೊಂದಿತ್ತು.

ನವದೆಹಲಿ: ಅಮೆರಿಕದ ಮೆಸಾಚ್ಯುಸೆಟ್ಸ್‌ನಲ್ಲಿ 40 ಕೋಟಿ ರು. ಮೌಲ್ಯದ ಮನೆ ಹೊಂದಿದ್ದ ಶ್ರೀಮಂತ ಭಾರತೀಯ ಕುಟುಂಬದ ಮೂವರು ಶವವಾಗಿ ಪತ್ತೆಯಾಗಿದ್ದಾರೆ. ಆದರೆ ಇಡೀ ಕುಟುಂಬ ಕೊಲೆಯಾಗಿದೆಯೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ರಾಕೇಶ್‌ ಕಮಲ್‌ (57), ಟೀನಾ (54) ಮತ್ತು ಅರೀನಾ (18) ಮೃತ ದುರ್ದೈವಿಗಳು. ರಾಕೇಶ್‌ ಹಾಗೂ ಟೀನಾ ಎಡುನೋವಾ ಎಂಬ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದು, ಇದು 2020ರಿಂದ ನಷ್ಟಕ್ಕೆ ಸಿಲುಕಿಕೊಂಡಿತ್ತು. ಇದಾದ ಬಳಿಕ ಅವರು ಗಳಿಸಿದ್ದ ಆಸ್ತಿಯನ್ನು ಒಂದೊಂದಾಗಿ ಮಾರಬೇಕಾಗಿ ಬಂದಿತ್ತು. ಇದು ಕುಟುಂಬದ ನಡುವೆ ಗಲಾಟೆಗೆ ಕಾರಣವಾಗಿ ಸಾವಿನಲ್ಲಿ ಅಂತ್ಯ ಕಂಡಿರಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೆಲವು ದಿನಗಳಿಂದ ರಾಕೇಶ್‌ ಕುಟುಂಬದವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರ ಸಂಬಂಧಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಆಗಮಿಸಿದ ಪೊಲೀಸರಿಗೆ ಮೂವರು ಸಾವಿಗೀಡಾಗಿರುವುದು ತಿಳಿದುಬಂದಿದೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ ಬಳಿಕ ಸಂಪೂರ್ಣ ಮಾಹಿತಿ ನೀಡುವುದಾಗಿ ಮೆಸಾಚ್ಯುಸೆಟ್ಸ್‌ ಅಟಾರ್ನಿ ಹೇಳಿದ್ದಾರೆ.