ಭುವಿಗೆ ಶುಭಾಂಶು ಸೇರಿ 4 ಯಾನಿಗಳ ಶುಭಾಗಮನ

| N/A | Published : Jul 16 2025, 12:45 AM IST / Updated: Jul 16 2025, 04:32 AM IST

ಸಾರಾಂಶ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್‌) ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ ಭಾರತೀಯ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಹಾಗೂ ಇನ್ನೂ ಮೂವರು ಅಂತರಿಕ್ಷಯಾನಿಗಳು ಮಂಗಳವಾರ ಮಧ್ಯಾಹ್ನ 3.01ಕ್ಕೆ ಭೂಮಿಗೆ ಮರಳಿದ್ದಾರೆ.

 ಡಿಯಾಗೋ/ನವದೆಹಲಿ :  ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್‌) ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ ಭಾರತೀಯ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಹಾಗೂ ಇನ್ನೂ ಮೂವರು ಅಂತರಿಕ್ಷಯಾನಿಗಳು ಮಂಗಳವಾರ ಮಧ್ಯಾಹ್ನ 3.01ಕ್ಕೆ ಭೂಮಿಗೆ ಮರಳಿದ್ದಾರೆ.

ಇದನ್ನು ಭಾರತದ ಭವಿಷ್ಯದ ಮಾನವ ಸಹಿತ ಗಗನಯಾನ ಯೋಜನೆ ಹಾಗೂ ಭಾರತದ್ದೇ ಆದ ಅಂತರಿಕ್ಷ ಕೇಂದ್ರ ನಿರ್ಮಾಣದ ಕನಸಿನತ್ತ ಪ್ರಮುಖ ಹೆಜ್ಜೆ ಎಂದೇ ಬಣ್ಣಿಸಲಾಗಿದೆ. ಏಕೆಂದರೆ ಗಗನಯಾನದ ಮುಂದಿನ ಯೋಜನೆಗಳು ಶುಕ್ಲಾ ನೇತೃತ್ವದಲ್ಲಿ ನಡೆಯುವ ನಿರೀಕ್ಷೆ ಇದೆ.

20 ದಿನಗಳ (433 ಗಂಟೆ) ಬಾಹ್ಯಾಕಾಶ ಯಾನ (2 ದಿನ ಪ್ರಯಾಣ+18 ದಿನ ಅಂತರಿಕ್ಷ ವಾಸ) ಮುಗಿಸಿ 22.5 ಗಂಟೆ ಪ್ರಯಾಣದ ಬಳಿಕ ಗಗನಯಾತ್ರಿಗಳು ಮಾತೃಗ್ರಹಕ್ಕೆ ಮರಳಿದ್ದು, ಅವರನ್ನು ಹೊತ್ತುತಂದ ಡ್ರ್ಯಾಗನ್‌ ಗ್ರೇಸ್‌ ಬಾಹ್ಯಾಕಾಶ ನೌಕೆಯು ಕ್ಯಾಲಿಫೋರ್ನಿಯಾ ಸಮೀಪದ ಸ್ಯಾನ್ ಡಿಯಾಗೋದ ಪಿಸಿಫಿಕ್‌ ಸಾಗರದಲ್ಲಿ ಸುರಕ್ಷಿತವಾಗಿ ಸ್ಪ್ಲ್ಯಾಷ್‌ ಲ್ಯಾಂಡ್‌ (ಸಾಗರಕ್ಕೆ ಅಪ್ಪಳಿಸುವುದು) ಆಗಿದೆ.

ನೌಕೆಯು ಸೋಮವಾರ ಸಂಜೆ 4.45ಕ್ಕೆ ಐಎಸ್‌ಎಸ್‌ನಿಂದ ಬೇರ್ಪಟ್ಟು ತನ್ನ ಪ್ರಯಾಣ ಆರಂಭಿಸಿತ್ತು.

 ಭೂಮಿಗೆ ಬಂದ ಬಳಿಕ..:

ಗಂಟೆಗೆ 28,000 ಕಿ.ಮೀ ವೇಗದಲ್ಲಿ ಬೆಂಕಿಯ ಚೆಂಡಿನಂತೆ ಭೂಮಿಯತ್ತ ನುಗ್ಗಿಬಂದ ನೌಕೆಯ ವೇಗವನ್ನು ನಿಯಂತ್ರಿಸಲು 2 ಹಂತದಲ್ಲಿ (ಮೊದಲನೆಯದು 5.7 ಕಿ.ಮೀ. ಎತ್ತರದಲ್ಲಿ, ಎರಡನೆಯದು 2 ಕಿ.ಮೀ. ಎತ್ತರದಲ್ಲಿ) ಪ್ಯಾರಾಚೂಟ್‌ ತೆರೆದುಕೊಂಡವು. ಬಳಿಕ ಸುರಕ್ಷಿತವಾಗಿ ಸಾಗರಕ್ಕೆ ಇಳಿದ ನೌಕೆಯನ್ನು ರಿಕವರಿ ದೋಣಿ (ಗಗನಯಾತ್ರಿಗಳು ಕ್ಯಾಪ್ಸೂಲ್‌ನಿಂದ ಇಳಿವ ದೋಣಿ) ಯತ್ತ ಸ್ಪೇಸ್‌ಎಕ್ಸ್‌ನ ಸ್ಪೀಡ್‌ ಬೋಟ್‌ಗಳು ಎಳೆದೊಯ್ದಿದ್ದು, ಬಳಿಕ ಗಗನಯಾತ್ರಿಗಳನ್ನು ಹೆಲಿಕಾಪ್ಟರ್‌ನಲ್ಲಿ ದಡಕ್ಕೆ ಕರೆದೊಯ್ಯಲಾಯಿತು. ಅದಕ್ಕೂ ಮೊದಲು, ಕ್ಯಾಪ್ಸ್ಯೂಲ್‌ ಒಳಗಿದ್ದಾಗಲೇ ನಾಲ್ವರಿಗೂ ಅನೇಕ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. 

ನಗುತ್ತಾ ಹೊರಬಂದ ಶುಕ್ಲಾ:

ಸಾಗರದಲ್ಲಿಳಿದ ನೌಕೆಯು ರಿಕವರಿ ದೋಣಿ ಬಳಿ ಬರುತ್ತಿದ್ದಂತೆ, ಒಳಗಿದ್ದ ಗಗನಯಾತ್ರಿಗಳೆಲ್ಲಾ ನಗುಮೊಗದಿಂದ ಒಬ್ಬೊಬ್ಬರಾಗಿ ಹೊರಬಂದರು. ಮೊದಲು ಕಮಾಂಡರ್‌ ಪೆಗ್ಗಿ ವಿಟ್ಸನ್‌  , ಅವರ ಬೆನ್ನಿಗೆ ಭಾರತೀಯ ಶುಕ್ಲಾ ಮಂದಸ್ಮಿತರಾಗಿ ಹೊರಬಂದರು. ಬಳಿಕ ಸ್ಲಾವೋಸ್ಜ್ ಉಜ್ನಾನ್ಸ್ಕಿ ವಿಸ್ನಿಯೆವ್ಸ್ಕಿ, ಟಿಬೋರ್‌ ಕಾಪು ಕೂಡ ಸಣ್ಣ ಜಾರುಬಂಡಿಯಲ್ಲಿ ಬಂದರು. ಅವರೆಲ್ಲ ಮಗುವಿನಂತೆ ಒಂದೊಂದೇ ಹೆಜ್ಜೆ ಇಡುತ್ತಿದ್ದುದು ಕಂಡುಬಂತು. ಭೂಮಿಯ ವಾತಾವರಣದಿಂದ ಬಹುದಿನ ದೂರವಿದ್ದ ಕಾರಣ, ಇಲ್ಲಿನ ವಾತಾವರಣಕ್ಕೆ ಮತ್ತೆ ಹೊಂದಿಕೊಳ್ಳುವ ಸಲುವಾಗಿ ಎಲ್ಲಾ ಗಗನಯಾತ್ರಿಗಳನ್ನು 7 ದಿನಗಳ ಕಾಲ ಪುನಶ್ಚೀತನ ಕಾರ್ಯಕ್ರಮಕ್ಕೆ ಒಳಪಡಿಸಲಾಗುತ್ತದೆ.

Read more Articles on