ಸಾರಾಂಶ
ವಾಷಿಂಗ್ಟನ್: ಚುನಾವಣಾ ಪ್ರಚಾರ ರ್‍ಯಾಲಿ ವೇಳೆ ವ್ಯಕ್ತಿಯೊಬ್ಬನಿಂದ ನಡೆದ ಗುಂಡಿನ ದಾಳಿ ಮತ್ತು ಚೆಲ್ಲಿದ ರಕ್ತವು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪರ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅನುಕಂಪದ ಅಲೆ ಎಬ್ಬಿಸುವ ಸಾಧ್ಯತೆ ಇದೆ.
ಡೆಮಾಕ್ರೆಟ್ ಪಕ್ಷದ ಅಭ್ಯರ್ಥಿ, ಹಾಲಿ ಅಧ್ಯಕ್ಷ ಜೋ ಬೈಡೆನ್ ವಿರುದ್ಧ ಕಣಕ್ಕೆ ಇಳಿಯಲು ನಿರ್ಧರಿಸಿರುವ ಟ್ರಂಪ್ ಈಗಾಗಲೇ ತಮ್ಮ ಎದುರಾಳಿ ವಿರುದ್ಧ ಸತತ ಟೀಕಾಪ್ರಹಾರಗಳ ಮೂಲಕ ಸುದ್ದಿಯಲ್ಲಿದ್ದರು. ಮತ್ತೊಂದೆಡೆ ವಯೋಸಹಜ ಸಮಸ್ಯೆ ಎದುರಿಸುತ್ತಿರುವ ಬೈಡೆನ್‌ಗೆ ಸ್ವತಂತ್ರವಾಗಿ ನಡೆದಾಡಲು ಆಗುತ್ತಿಲ್ಲ. ಎದುರಿಗಿರುವ ವ್ಯಕ್ತಿ ಯಾರು? ಅಕ್ಕ ಪಕ್ಕ ಏನಾಗುತ್ತಿದೆ? ಎಂಬುದರ ಅರಿವೂ ಇಲ್ಲದ ಸ್ಥಿತಿ ತಲುಪಿದ್ದಾರೆ.
ಇತ್ತೀಚಿನ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬೈಡೆನ್ ವರ್ತನೆ ಕಟು ಟೀಕೆ ಮತ್ತು ನಗೆಪಾಟಲಿಗೆ ಗುರಿಯಾಗಿದೆ. ಅವರು ಸ್ಪರ್ಧಾ ಕಣದಿಂದ ಹಿಂದೆ ಸರಿಯಬೇಕು ಎಂಬ ಆಗ್ರಹ ಅವರ ಬೆಂಬಲಿಗರಿಂದಲೇ ವ್ಯಕ್ತವಾಗುತ್ತಿದೆ.
ಆದರೂ ಹಟ ಹಿಡಿದು ತಾವೇ ಅಭ್ಯರ್ಥಿ ಎಂದು ಬೈಡೆನ್ ಹೇಳುತ್ತಿದ್ದಾರೆ.ಇಂಥದ್ದರ ನಡುವೆಯೇ ನಡೆದ ಗುಂಡಿನ ದಾಳಿ ಟ್ರಂಪ್ ಪರವಾಗಿ ಅನುಕಂಪದ ಅಲೆ ಹೆಚ್ಚಿಸಬಹುದು. ದಾಳಿಯನ್ನೇ ಗುರಿಯಾಗಿಸಿಕೊಂಡು ದೇಶದ ಭದ್ರತಾ ವ್ಯವಸ್ಥೆ ಬಗ್ಗೆ ಇದಕ್ಕೆ ಕಾರಣವಾದ ಬೈಡೆನ್ ಬಗ್ಗೆ ಟ್ರಂಪ್ ದಾಳಿ ನಡೆಸಬಹುದು. ‘ಚುನಾವಣೆ ಗೆಲ್ಲಲೆಂದೇ ದಾಳಿ ನಡೆಸಬಹುದೆಂದು’ ಎಂದು ಟ್ರಂಪ್ ಪಕ್ಷದ ನಾಯಕರು ಆರೋಪಿಸಿದ್ದಾರೆ. ಇದನ್ನು ಅವರು ಚುನಾವಣೆಯ ತಂತ್ರವಾಗಿ ಬಳಸಬಹುದಾಗಿದೆ. ಒಟ್ಟಾರೆ ದಾಳಿ ಘಟನೆ ಟ್ರಂಪ್‌ಗೆ ಒಂದಿಷ್ಟು ಹೆಚ್ಚಿನ ಮತಗಳನ್ನು ದೊರಕಿಸಿಕೊಡುವುದಂತೂ ಖಚಿತ ಎನ್ನಲಾಗಿದೆ.
ಮಸ್ಕ್, ಬೆಜೋಸ್ ಬೆಂಬಲ:
ದಾಳಿಯ ಬೆನ್ನಲ್ಲೇ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರು ಟ್ರಂಪ್‌ಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಇನ್ನೊಂದೆಡೆ ಇನ್ನೊಬ್ಬ ಸಿರಿವಂತ ಉದ್ಯಮಿ ಜೆಫ್ ಬೆಜೋಸ್, ಟ್ರಂಪ್ ಧೈರ್ಯವಂತ ಎಂದು ಶ್ಲಾಘಿಸಿದ್ದಾರೆ.