ಸಾರಾಂಶ
ಮನುಷ್ಯರಲ್ಲಿ ಗಂಡುಮಕ್ಕಳ ಜನನಕ್ಕೆ ಕಾರಣವಾಗುವ ವೈ ಕ್ರೋಮೋಸೋಮ್ (ವರ್ಣತಂತು) ಕ್ರಮೇಣ ನಾಶವಾಗುತ್ತಿದೆ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಈ ವರ್ಣತಂತು ಸಂಪೂರ್ಣ ನಾಶವಾಗಲು ಇನ್ನೂ 1.1 ಕೋಟಿ ವರ್ಷಗಳು ಬೇಕಿದೆ. ಅಂದರೆ, 1.1 ಕೋಟಿ ವರ್ಷಗಳ ನಂತರ ಗಂಡುಮಕ್ಕಳೇ ಹುಟ್ಟುವುದಿಲ್ಲ!
ನವದೆಹಲಿ: ಮನುಷ್ಯರಲ್ಲಿ ಗಂಡುಮಕ್ಕಳ ಜನನಕ್ಕೆ ಕಾರಣವಾಗುವ ವೈ ಕ್ರೋಮೋಸೋಮ್ (ವರ್ಣತಂತು) ಕ್ರಮೇಣ ನಾಶವಾಗುತ್ತಿದೆ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಈ ವರ್ಣತಂತು ಸಂಪೂರ್ಣ ನಾಶವಾಗಲು ಇನ್ನೂ 1.1 ಕೋಟಿ ವರ್ಷಗಳು ಬೇಕಿದೆ. ಅಂದರೆ, 1.1 ಕೋಟಿ ವರ್ಷಗಳ ನಂತರ ಗಂಡುಮಕ್ಕಳೇ ಹುಟ್ಟುವುದಿಲ್ಲ!
ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿರುವ ಲಾ ಟ್ರೋಬ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ಪ್ರೊಫೆಸರ್ ಜೆನ್ನಿಫರ್ ಮಾರ್ಷಲ್ ಗ್ರೇವ್ಸ್ ಎಂಬ ವಿಜ್ಞಾನಿ ಈ ಬಗ್ಗೆ ಅಧ್ಯಯನ ನಡೆಸಿ, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಜರ್ನಲ್‌ನಲ್ಲಿ ಪ್ರಬಂಧ ಪ್ರಕಟಿಸಿದ್ದಾರೆ. ಅದರ ಪ್ರಕಾರ, ಗಂಡುಮಕ್ಕಳ ಜನನಕ್ಕೆ ಕಾರಣವಾಗುವ ವೈ ವರ್ಣತಂತುವಿನಲ್ಲಿರುವ 1438 ಮೂಲ ಜೀನ್ಸ್‌ಗಳ ಪೈಕಿ 1393 ಜೀನ್ಸ್‌ಗಳು ಕಳೆದ 30 ಕೋಟಿ ವರ್ಷದಲ್ಲಿ ನಾಶವಾಗಿವೆ. ಇನ್ನುಳಿದ 45 ಜೀನ್ಸ್‌ಗಳು ಮುಂದಿನ 1.1 ಕೋಟಿ ವರ್ಷದಲ್ಲಿ ನಾಶವಾಗಲಿವೆ. ಆಗ ಗಂಡುಮಕ್ಕಳ ಜನನ ಸಂಪೂರ್ಣವಾಗಿ ನಿಲ್ಲುತ್ತದೆ.
ಪುರುಷ ಮತ್ತು ಮಹಿಳೆಯ ಮಿಲನದ ಬಳಿಕ ಭ್ರೂಣದಲ್ಲಿ ಎಕ್ಸ್ ಮತ್ತು ವೈ ವರ್ಣತಂತುಗಳು ಜೊತೆಯಾದರೆ ಗಂಡುಮಗು, ಎಕ್ಸ್ ಮತ್ತು ಎಕ್ಸ್ ವರ್ಣತಂತುಗಳು ಒಂದಾದರೆ ಹೆಣ್ಣುಮಗು ಜನಿಸುತ್ತದೆ. ಎಕ್ಸ್ ವರ್ಣತಂತುವಿಗಿಂತ ವೈ ವರ್ಣತಂತು ತುಂಬಾ ಚಿಕ್ಕದು. ಈ ವೈ ವರ್ಣತಂತು ಕ್ರಮೇಣ ಅವಸಾನಗೊಳ್ಳುತ್ತಿದೆ ಎಂದು ಜೆನ್ನಿಫರ್ ಹೇಳುತ್ತಾರೆ.
ಆದರೆ, ಪುರುಷರು ನಿರಾಶರಾಗಬೇಕಿಲ್ಲ. ಜಪಾನ್‌ನಲ್ಲಿ ಒಂದು ಜಾತಿಯ ಇಲಿಯಲ್ಲಿ ಹೀಗೇ ವೈ ವರ್ಣತಂತುಗಳು ಸಂಪೂರ್ಣ ಅವಸಾನಗೊಳ್ಳುತ್ತಿದ್ದಾಗ ಗಂಡು ಇಲಿಯ ಜನನಕ್ಕೆ ಕಾರಣವಾಗುವ ಹೊಸ ವರ್ಣತಂತು ಸಹಜವಾಗಿಯೇ ಅಭಿವೃದ್ಧಿಗೊಂಡಿದೆ. ಹೀಗಾಗಿ ಮನುಷ್ಯರಲ್ಲೂ ಇಂತಹ ಬೆಳವಣಿಗೆ ಆಗಬಹುದು ಎಂದು ನಂಬಲಾಗಿದೆ.